ನಾಗ್ಪುರ: ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತ ಸಮುದಾಯದ ಮೇಲೆ ಉದ್ದೇಶಿತ ದಾಳಿಗಳ ಮಧ್ಯೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಅಲ್ಲಿ ವಾಸಿಸುವ ಹಿಂದೂಗಳನ್ನು ವಿನಾಕಾರಣ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂದು ಮಹಲ್ ಪ್ರದೇಶದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದ ಭಾಗವತ್, ಬಾಂಗ್ಲಾದೇಶದಲ್ಲಿ ಹಿಂದೂಗಳು ಯಾವುದೇ ಅನ್ಯಾಯ ಮತ್ತು ದೌರ್ಜನ್ಯಗಳನ್ನು ಎದುರಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಭಾರತದ್ದಾಗಿದೆ. ಅವರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಮುಂಬರುವ ಪೀಳಿಗೆಯು 'ಸ್ವತಂತ್ರ'(ಸ್ವಾತಂತ್ರ್ಯ)ದ 'ಸ್ವಾ'ವನ್ನು ರಕ್ಷಿಸುವ ಕರ್ತವ್ಯ ಹೊಂದಿದೆ. ಏಕೆಂದರೆ ಜಗತ್ತಿನಲ್ಲಿ ಯಾವಾಗಲೂ ಇತರ ದೇಶಗಳ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುವ ಜನ ಇರುತ್ತಾರೆ. ಹೀಗಾಗಿ ನಾವು ಜಾಗರೂಕರಾಗಿರಬೇಕು ಮತ್ತು ಅವರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದರು.
ಪರಿಸ್ಥಿತಿ ಎಲ್ಲ ಕಾಲದಲ್ಲೂ ಒಂದೇ ರೀತಿ ಇರುವುದಿಲ್ಲ. ನಾವು ಈಗ ನೆರೆಯ ದೇಶದಲ್ಲಿನ ಪರಿಸ್ಥಿತಿಯನ್ನು ನೋಡಬಹುದು. ಸಾಕಷ್ಟು ಹಿಂಸಾಚಾರಗಳು ನಡೆಯುತ್ತಿವೆ ಮತ್ತು ಅಲ್ಲಿ ವಾಸಿಸುವ ಹಿಂದೂಗಳು ಯಾವುದೇ ಕಾರಣವಿಲ್ಲದೆ ಹಿಂಸಾಚಾರ ಎದುರಿಸುತ್ತಿದ್ದಾರೆ" ಎಂದು ಅವರು ಬಾಂಗ್ಲಾದೇಶವನ್ನು ಹೆಸರಿಸದೆ ಹೇಳಿದರು.
"ಭಾರತವು ಇತರರಿಗೆ ಸಹಾಯ ಮಾಡುವ ಸಂಪ್ರದಾಯವನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಯಾರ ಮೇಲೂ ದಾಳಿ ಮಾಡಿಲ್ಲ. ಆದರೆ ತೊಂದರೆಯಲ್ಲಿರುವವರಿಗೆ ಅವರು ನಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಲೆಕ್ಕಿಸದೆ ಸಹಾಯ ಮಾಡಿದೆ" ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.