ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಇವರ ಸೇವಾರೂಪದಲ್ಲಿ ಜರಗುತ್ತಿರುವ ಶ್ರೀಮದ್ ದೇವೀ ಭಾಗವತ ನವಾಹ ಮತ್ತು ಯಕ್ಷಗಾನ ತಾಳಮದ್ದಳೆ ನವಾಹದ ಸಮಾರೋಪ ಸಮಾರಂಭ ಆ. 11ರಂದು ಭಾನುವಾರ ಜರಗಲಿರುವುದು.
ಅಪರಾಹ್ನ 2.30ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ಯಕ್ಷಗಾನ ಬೊಂಬೆಯಾಟ ಮಹಿಷಾಸುರ ವಧೆ, ಸಂಜೆ 4 ಗಂಟೆಯಿಂದ ಯಕ್ಷಗಾನ ತಾಳಮದ್ದಳೆ ಶಾಂಭವೀ ವಿಜಯ ನಡೆಯಲಿದೆ. ಹಿಮ್ಮೇಳದಲ್ಲಿ ಚಿನ್ಮಯ ಭಟ್ ಕಲ್ಲಡ್ಕ ಹಾಗೂ ಕಾವ್ಯಶ್ರೀ ಅಜೇರು ಭಾಗವತಿಕೆಯಲ್ಲಿ ಹಾಗೂ ಚೆಂಡೆಮದ್ದಳೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣಪ್ರಕಾಶ ಉಳಿತ್ತಾಯ, ಲವಕುಮಾರ್ ಐಲ, ಚಕ್ರತಾಳದಲ್ಲಿ ನಿಶ್ವತ್ ಜೋಗಿ ಜೊತೆಗೂಡಲಿದ್ದಾರೆ. ಹಿರಣ್ಯ ವೆಂಕಟೇಶ್ವರ ಭಟ್, ಗಣರಾಜ ಕುಂಬಳೆ, ವಾಸುದೇವ ರಂಗಾ ಭಟ್ಟ, ರವಿರಾಜ ಪನೆಯಾಲ, ದಿನೇಶ ಶೆಟ್ಟಿ ಕಾವಳಕಟ್ಟೆ, ಸರ್ಪಂಗಳ ಈಶ್ವರ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ ಅರ್ಥದಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ : ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಯಕ್ಷಲೋಕವನ್ನು ಅಗಲಿದ ಹಿರಿಯ ಕಲಾವಿದರಾದ ಕುಂಬಳೆ ಶ್ರೀಧರ ರಾವ್ ಹಾಗೂ ಹಿರಿಯ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರ ಸಂಸ್ಮರಣಾ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಲಿದೆ. ಶ್ರೀ ಎಡನೀರು ಮಠ ಮತ್ತು ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಯೋಜನೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ ಸಂಸ್ಮರಣಾ ಭಾಷಣ ಮಾಡಲಿದ್ದಾರೆ.
(ಚಿತ್ರ: ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರು ಶ್ರೀದೇವಿ ಭಾಗವತ ಪ್ರವಚನ ಮಾಡುತ್ತಿರುವುದು.