ನವದೆಹಲಿ: 'ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಮಗೆ ಹೆಮ್ಮೆಯಾಗುತ್ತದೆ. ಅವರು ಕೇಂದ್ರ ಸರ್ಕಾರಿ ನೌಕರರ ಆತಂಕಗಳನ್ನು ಅರ್ಥ ಮಾಡಿಕೊಂಡರು. ಇದಕ್ಕಾಗಿ ಸಮಿತಿಯೊಂದನ್ನೂ ರಚಿಸಿದರು. ಈಗ ಅರ್ಥಪೂರ್ಣ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಪಕ್ಷದ ವತಿಯಿಂದ ಸರ್ಕಾರವನ್ನು, ವಿಶೇಷವಾಗಿ ಪ್ರಧಾನಿ ಮೋದಿ ಅವರನ್ನು ನಾವು ಅಭಿನಂದಿಸುತ್ತೇವೆ' ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಅವರು ಭಾನುವಾರ ಹೇಳಿದರು.
'ಈ ನಿರ್ಧಾರವು ನಿವೃತ್ತ ಕೇಂದ್ರ ಸರ್ಕಾರಿ ನೌಕರರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಇದು ಅವರ ಬಹುಕಾಲದ ಬೇಡಿಕೆಯಾಗಿತ್ತು' ಎಂದರು.
'ಬಿಜೆಪಿಯು 'ಯು-ಟರ್ನ್' ಹೊಡೆದಿದೆ' ಎಂದು ಲೇವಡಿ ಮಾಡಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಪ್ರಸಾದ್, 'ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ವಿಧಾನಸಭೆ ಚುನಾವಣೆ ವೇಳೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಈ ಯೋಜನೆ ಅಲ್ಲಿ ಜಾರಿಯಾಗಿದೆಯೇ ಎಂಬ ಕುರಿತು ನಾನು ರಾಹುಲ್ ಗಾಂಧಿ ಹಾಗೂ ಅವರ ಸರ್ಕಾರಕ್ಕೆ ಪ್ರಶ್ನೆ ಕೇಳಬಯಸುತ್ತೇನೆ. ಹಳೆ ಪಿಂಚಣಿ ಯೋಜನೆ ಕುರಿತು ಕಾಂಗ್ರೆಸ್ ಭಾರಿ ಕಾಳಜಿ ವ್ಯಕ್ತಪಡಿಸುತ್ತದೆ. ಆದರೆ, ಇದನ್ನು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸುವ ಧೈರ್ಯ ಮಾತ್ರ ತೋರಲಿಲ್ಲ' ಎಂದರು.