ಕಾಸರಗೋಡು: ಜಿಲ್ಲೆಯ ನಾನಾ ದೇಗುಲ, ನಾಗಬನ, ನಾಗನ ಕಟ್ಟೆಗಳಲ್ಲಿ ಭಕ್ತಿ ಸಂಭ್ರಮದ ನಾಗರಪಂಚಮಿ ಶುಕ್ರವರ ಆಚರಿಸಲಾಯಿತು. ಶ್ರೀನಾಗದೇವರಿಗೆ ಹಾಲು, ಸೀಯಾಳ ಅಭಿಷೇಕ, ತಂಬಿಲ ಸೇವೆ ನಡೆಸುವ ಮೂಲಕ ಪುನೀತರಾದರು.
ಮಳೆ ದೂರಾಗಿದ್ದುದು ನಾಗರಪಂಚಮಿ ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ವರದಾನವಗಿತ್ತು. ನಾಗರಪಂಚಮಿ ಉತ್ಸವದ ಹಿನ್ನೆಲೆಯಲ್ಲಿ ಹಾಲು, ಹೂವಿಗೆ ಭಾರಿ ಬೇಡಿಕೆ ಕಂಡುಬಂದಿತ್ತು. ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದ ನಾಗನ ಕಟ್ಟೆ, ಕೆಎಸ್ಸಾರ್ಟಿಸಿ ಬಸ್‍ನಿಲ್ದಾಣದ ಕಟ್ಟೆ, ಅಶೋಕನಗರದ ನಾಗನಕಟ್ಟೆ, ಕೂಡ್ಲು ಶೇಷವನ ದೇವಸ್ಥಾನ, ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಂಠಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ವರ್ಕಾಡಿ ಕಾವೀ ಸುಬ್ರಹ್ಮಣ್ಯ ದೇವಸ್ಥಾನ, ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಸೇರಿದಂತೆ ಪ್ರಮುಖ ದೇವಾಲಯದ ನಾಗನ ಕಟ್ಟೆಗಳಲ್ಲಿ ನಾಗರಪಂಚಮಿ ಉತ್ಸವ ಆಚರಿಸಲಾಯಿತು. ದೇವಾಲಯ, ನಾಗಬನ, ನಾಗರಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಸರತಿಸಾಲು ಕಂಡುಬಂದಿತ್ತು.
ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸನಿಹದ ನಾಗರಾಜಕಟ್ಟೆಯಲ್ಲಿ ಭಕ್ತಾದಿಗಳು ಉದ್ದನೆಯ ಸರತಿಸಾಲಿನಲ್ಲಿ ನಿಂತು ನಾಗದೇವರಿಗೆ ಹಾಲು, ಸೀಯಾಳ ಸಮರ್ಪಿಸಿದರು.