ಕುಂಬಳೆ: ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ. (ಕೇರಳ) ಬಸ್ಸುಗಳಲ್ಲಿ ಪ್ರಯಾಣ ಮಾಡಲು ಇಚ್ಛಿಸುವ ಪ್ರಯಾಣಿಕರಿಗೆ ಇತ್ತೀಚೆಗೆ ನಿರಂಣತರ ನಿರಾಶೆ ಕಾಡತೊಡಗಿದೆ. ಕಳೆದ ಕೆಲವು ವರ್ಷಗಳಿಂದ ಕೇರಳ ಸಾರಿಗೆ ಬಸ್ ಗಳ ಸಂಖ್ಯೆಯಲ್ಲಿ ಗಣನೀಯ ಕೊರತೆ ಕಾಡಿದ್ದು, ಬಸ್ಸುಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವ ಬಗ್ಗೆ ಪ್ರಯಾಣಿಕರು ಆರೋಪಿಸಿದ್ದಾರೆ. ವಿಶೇಷವಾಗಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಬೆಳಿಗ್ಗೆ 7 ರಿಂದ 9.30 ಮತ್ತು ಸಂಜೆ 4 ರಿಂದ 7 ರ ವೇಳೆಯಲ್ಲಿ ಬಸ್ಸುಗಳು ಲಭ್ಯವಾಗುವುದಿಲ್ಲವೆಂಬ ಆರೋಪ ವ್ಯಾಪಕವಾಗಿದೆ.
ಮಂಗಳೂರು ಕಡೆಗೆ ಬರುವ ಮತ್ತು ಹಿಂತಿರುಗುವ ಪ್ರಯಾಣಿಕರು ಈ ಕಾರಣದಿಂದ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಿಗಳು, ಮತ್ತು ವಿವಿಧ ಆಸ್ಪತ್ರೆಗಳಿಗೆ ತೆರಳುವ ರೋಗಿಗಳ ಸಹಿತ ವ್ಯಾಪಕ ಸಂಖ್ಯೆ ಜನರಿಗೆ ಬಸ್ಸುಗಳ ಕೊರತೆಯಿಂದಾಗಿ ಸಂಕಷ್ಟ ನಿತ್ಯದ ಕೊಡುಗೆಯಾಗಿದೆ. ಕರ್ನಾಟಕ ಆರ್.ಟಿ.ಸಿ. ಬಸ್ಸುಗಳಲ್ಲಿ ಬಾಗಿಲುಗಳಿಲ್ಲದ ಕಾರಣ ಅಪಘಾತ ಭಯದಿಂದ ಹಲವು ಪ್ರಯಾಣಿಕರು ಬಸ್ಸು ಹತ್ತಲು ಹೆದರಿಕೆಯಾಗುತ್ತಿರುವುದಾಗಿ ಕೆಲವು ಪ್ರಯಾಣಿಕರು ಹೇಳುತಿದ್ದಾರೆ.
ಜೊತೆಗೆ ಸಾರಿಗೆ ಬಸ್ಸುಗಳು ಸರ್ವೀಸ್ ರಸ್ತೆಯಲ್ಲಿ ಬಾರದೆ ಹೆದ್ದಾರಿಯಲ್ಲಿ ಎರಡು ಮೂರು ಬಸ್ಸುಗಳು ಪೈಪೋಟಿಯಲ್ಲಿ ಸಂಚಾರ ನಡೆಸುತ್ತಿರುವುದಾಗಿಯೂ ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಸರ್ವೀಸ್ ರಸ್ತೆಯಲ್ಲೇ ಪರದಾಡಬೇಕಾದ ಪರಿಸ್ಥಿತಿ ಎದುರಾಗಿರುವುದಾಗಿಯೂ ಆರೋಪ ಕೇಳಿ ಬಂದಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಸಂಚಾರ ಅವ್ಯವಸ್ಥೆ-ದಟ್ಟಣೆಯೂ ಒಂದು ಸಮಸ್ಯೆಯಾಗಿದೆ. ಆದಾಗ್ಯೂ, ಬಸ್ಸುಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಮಾಡಿಲ್ಲವೆಂದು ಕಾಸರಗೋಡು ಕೆ.ಎಸ್.ಆರ್.ಟಿ.ಸಿ. ಅಧಿಕೃತರು ತಿಳಿಸುತ್ತಾರೆ.
ಫಲವಿಲ್ಲದ ಗ್ರಾಮೀಣ ಹೆದ್ದಾರಿ:
ಈ ಮಧ್ಯೆ ಕಳೆದ ಮೂರು ವರ್ಷಗಳಿಂದ ತೆರೆದುಕೊಂಡಿರುವ ಗ್ರಾಮೀಣ ಹೆದ್ದಾರಿ(ಹಿಲ್ ಹೈವೇ) ಸಾಮಾನ್ಯ ಪ್ರಯಾಣಿಕರಿಗೆ ಉಪಯೋಗ ಶೂನ್ಯವಾಗಿದೆ. ಮುಡಿಪು ಸಮೀಪದ ನಂದಾರಪದವಿನಿಂದ ಕೇರಳದ ಇಡಪ್ಪಳ್ಳಿವರೆಗೂ ವಿಸ್ತರಿಸಿರುವ ಒಳನಾಡಿನ ಮೂಲಕ ನಿರ್ಮಾಣಗೊಂಡ ಈ ರಸ್ತೆಗಳಲ್ಲಿ ಎಲ್ಲೂ ಬಸ್ ಸೌಕರ್ಯವಿಲ್ಲದಿರುವುಉದರಿಂದ ಖಾಸಗೀ ವಾಹನದವರಿಗಷ್ಟೇ ಪ್ರಯೋಜನಕಾರಿ. ಸುಂದರವಾಗಿ, ಅಗಲ ವಿಸ್ತಾರದ ಬಹುಕೋಟಿ ವೆಚ್ಚದ ರಸ್ತೆ ಎಲ್ಲಿಗೆ, ಹೇಗೆ ಪ್ರಯೋಜನಕಾರಿ ಎಂಬುದು ಇದೀಗ ಜನರು ಕೇಳುತ್ತಿರುವ ಪ್ರಶ್ನೆ.