ಮುಳ್ಳೇರಿಯ (ಕಾಸರಗೋಡು): ರಾಷ್ಟ್ರಧ್ವಜವನ್ನು ಕೆಳಗಿಳಿಸುವ ವೇಳೆ ವಿದ್ಯುತ್ ತಂತಿಯ ಮೇಲೆ ಕಬ್ಬಿಣದ ಕಂಬ ಬಿದ್ದು ಆಘಾತಕ್ಕೊಳಗಾಗಿ ಮುಳ್ಳೇರಿಯ ಚರ್ಚಿನ ಪಾದ್ರಿಯೊಬ್ಬರು ಮೃತಪಟ್ಟಿದ್ದಾರೆ. ಫಾ. ಮ್ಯಾಥ್ಯೂ ಕುಟಿಲ್ (ಶಿನ್ಸ್ ಆಗಸ್ಟಿನ್-29) ಮೃತರು.
ಗುರುವಾರ ಸಂಜೆ 6 ಗಂಟೆಗೆ ವಿದ್ಯುತಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಮುಳ್ಳೇರಿಯ ಸಹಕಾರಿ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಇವರೊಂದಿಗಿದ್ದ ಮುಳ್ಳೇರಿಯ ಬೆಳ್ಳಿಪ್ಪಾಡಿ ಮೂಲದ ಸೆಬಿನ್ ಜೋಸೆಫ್ (28) ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಷ್ಟ್ರಧ್ವಜವನ್ನು ಕೆಳಗಿಳಿಸುವಾಗ ಧ್ವಜ ಹಗ್ಗಕ್ಕೆ ಸಿಲುಕಿಕೊಂಡಿತು. ಧ್ವಜ ಬಿಚ್ಚಲು ಸಾಧ್ಯವಾಗದೇ ಇದ್ದಾಗ ಕಬ್ಬಿಣದ ಧ್ವಜಸ್ತಂಭವನ್ನು ಎತ್ತಲು ಯತ್ನಿಸಿದಾಗ ಭಾರಕ್ಕೆ ಕಂಬ ವಾಲಿದ್ದು ಪಕ್ಕದಲ್ಲಿದ್ದ ಹೆಚ್.ಟಿ. ತಂತಿಗೆ ಸ್ಪರ್ಶಿಸಿ ಈ ಅವಘಡ ನಡೆಯಿತು.
ಒಂದೂವರೆ ವರ್ಷಗಳ ಹಿಂದೆ ಫಾ. ಮ್ಯಾಥ್ಯೂ ಕುಟಿಲ್ ಮುಳ್ಳೇರಿಯ ಚರ್ಚ್ ನ ಮುಖ್ಯಸ್ಥರಾಗಿ(ವಿಕಾರ್) ಅಧಿಕಾರ ವಹಿಸಿಕೊಂಡಿದ್ದರು. ಡಿಸೆಂಬರ್ 2020 ರಲ್ಲಿ ಫಾದರ್ ಪದವಿಯನ್ನು ಪಡೆದಿದ್ದರು. ನಂತರ ಅವರು ಚೆಂಬಂಟೊಟ್ಟಿ ಮತ್ತು ನೆಲ್ಲಿಕಂಬೋಯಿಲ್‍ನಲ್ಲಿ ಸಹಾಯಕ ವಿಕಾರ್ ಆಗಿ ಕೆಲಸ ಮಾಡಿದ್ದರು. ಮುಳ್ಳೇರಿಯಾದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ.ಪದವಿಗೆ ಸೇರ್ಪಡೆಗೊಂಡಿದ್ದು, ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ.
ಆದೂರು ಪೋಲೀಸರು ಪಂಚನಾಮೆ ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ಮೊನ್ಸಿಂಜರ್ ಮ್ಯಾಥ್ಯೂ ಆಲಂತುರ್ತಿ, ವಿವಿಧ ಚರ್ಚ್‍ಗಳ ಧರ್ಮಾಧಿಕಾರಿಗಳು ಮತ್ತು ವಿವಿಧ ಸಿಸ್ಟರ್ಸ್ ಸ್ಥಳಕ್ಕೆ ಆಗಮಿಸಿದರು. ಇವರು ತಂದೆ ದಿ. ಅಗಸ್ಟಿನ್. ತಾಯಿ ಲಿಜಿ, ಸಹೋದರರಾದ ಲಿಂಟೊ ಅಗಸ್ಟಿನ್ ಮತ್ತು ಬಿಂಟೊ ಅಗಸ್ಟಿನ್ ಅವರನ್ನು ಅಗಲಿದ್ದಾರೆ..