ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಕೆಲಸ ಮಾಡಲು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆ ಬಳಿಕ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ.
'ಈ ಕುರಿತಂತೆ ವಿದ್ಯಾರ್ಥಿಗಳ ಪರವಾಗಿ ನನ್ನನ್ನು ಮೊದಲ ಬಾರಿಗೆ ಸಂಪರ್ಕಿಸಿದಾಗ ನಾನು ನಿರಾಕರಿಸಿದ್ದೆ. ಮೊದಲಿಗೆ ಒಪ್ಪಿಗೆ ಸೂಚಿಸಿರಲಿಲ್ಲ. ನಾನು ಪೂರ್ಣಗೊಳಿಸಬೇಕಾದ ಬಹಳಷ್ಟು ಕೆಲಸಗಳಿವೆ. ಆದರೆ, ವಿದ್ಯಾರ್ಥಿಗಳು ಪದೇಪದೇ ಮನವಿ ಸಲ್ಲಿಸಿದ್ದರಿಂದ ಒಪ್ಪಿಕೊಂಡೆ' ಎಂದು ಯೂನುಸ್ ಹೇಳಿರುವುದಾಗಿ ಡೈಲಿ ಸ್ಟಾರ್ ವರದಿ ಮಾಡಿದೆ.
ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಒಕ್ಕೂಟದ(ಎಸ್‌ಎಡಿ) ಪ್ರತಿಭಟನಾಕಾರರು, ಉನ್ನತ ಹುದ್ದೆಗೆ ಯೂನುಸ್ ಹೆಸರನ್ನು ಪ್ರಸ್ತಾಪಿಸಿದ್ದರು. 'ಸೇನಾ ಮುಖ್ಯಸ್ಥರ ನೇತೃತ್ವದಲ್ಲಿ ನಾವು ಮಧ್ಯಂತರ ಸರ್ಕಾರ ರಚಿಸಲು ನಿರ್ಧಾರ ಮಾಡಿದ್ದೇವೆ, ಅದರಲ್ಲಿ ಅಂತರರಾಷ್ಟ್ರೀಯವಾಗಿ ಮನ್ನಣೆ ಹೊಂದಿರುವ ನೊಬೆಲ್ ಪ್ರಶಸ್ತಿ ವಿಜೇತ ಡಾ ಮೊಹಮ್ಮದ್ ಯೂನುಸ್ ಮುಖ್ಯ ಸಲಹೆಗಾರರಾಗಿರುತ್ತಾರೆ' ಎಂದು ಸಂಘಟನೆ ತಿಳಿಸಿತ್ತು.
ವಿದ್ಯಾರ್ಥಿಗಳು ಬಹಳಷ್ಟು ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಅವರಿಗೆ ಫಲ ಸಿಗಬೇಕಿದೆ. ಜನ ಕೂಡ ಅವರಿಗಾಗಿ ಕೆಲ ತ್ಯಾಗಗಳನ್ನು ಮಾಡಬೇಕಿದೆ ಎಂದು ಯೂನುಸ್ ಹೇಳಿದ್ದಾರೆ.
ಯೂನುಸ್ ಅವರು ಸದ್ಯ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶದಲ್ಲಿದ್ದು, ಆದಷ್ಟು ಬೇಗ ಭಾರತಕ್ಕೆ ಹಿಂದಿರುಗುವ ಸಾಧ್ಯತೆ ಇದೆ. ಒಲಿಂಪಿಕ್ಸ್ ಸಮಿತಿ ಆಹ್ವಾನದ ಮೇಲೆ ಅವರು ಪ್ಯಾರಿಸ್‌ಗೂ ತೆರಳಿದ್ದರು.
ಮೊಹಮ್ಮದ್ ಯೂನುಸ್ ಯಾರು?
84 ವರ್ಷದ ಮೊಹಮ್ಮದ್ ಯೂನುಸ್, ಖ್ಯಾತ ಅರ್ಥಶಾಸ್ತ್ರಜ್ಞ. ತಮ್ಮ ಮೈಕ್ರೊಫೈನಾನ್ಸ್ ಪರಿಕಲ್ಪನೆ ಮೂಲಕ ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತಿದ ಶ್ರೇಯ ಅವರದ್ದಾಗಿದೆ. ಆದರೆ, ಇದರಿಂದಾಗಿ ಅವರು ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರದ ದ್ವೇಷ ಕಟ್ಟಿಕೊಂಡಿದ್ದರು. ಬಡವರ ರಕ್ತ ಹೀರುತ್ತಿದ್ದಾರೆ ಎಂದು ಯೂನುಸ್ ವಿರುದ್ಧ ಹಸೀನಾ ಕಿಡಿಕಾರಿದ್ದರು.
ಹಸೀನಾ ಸರ್ಕಾರವು ಯೂನುಸ್ ವಿರುದ್ಧ 190ಕ್ಕೂ ಅಧಿಕ ಪ್ರಕರಣ ದಾಖಲಿಸಿತ್ತು. ಬಾಂಗ್ಲಾದೇಶ ಕಾರ್ಮಿಕರ ಕಾನೂನು ಉಲ್ಲಂಘಿಸಿದ ಆರೋಪದಡಿ ಅವರು ತಪ್ಪಿತಸ್ಥರೆಂದು ಜನವರಿಯಲ್ಲಿ ತೀರ್ಪು ಬಂದಿತ್ತು. ಸದ್ಯ, ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.