ವಾರ್ಸಾ: ಕಬಡ್ಡಿಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಸಿಗುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಪಾಸಿಟೀವ್ ಎನರ್ಜಿ ಹೊಂದಿರುವುದಾಗಿ ಪೋಲೆಂಡ್ ಕಬಡ್ಡಿ ಫೆಡರೇಷನ್ ಅಧ್ಯಕ್ಷ ಮೈಕಲ್ ಸ್ಪಿಕ್ಜೋ ಪ್ರತಿಕ್ರಿಯಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಬಡ್ಡಿ ಬಗ್ಗೆ ಮುತುವರ್ಜಿ ವಹಿಸುವಂತೆ ಕೋರಿದ್ದಾರೆ. ಕಬಡ್ಡಿ 2036ರ ಒಲಿಂಪಿಕ್ಸ್‌ನ ಭಾಗವಾಗಲಿದೆ ಎಂದು ಅವರು ಭರವಸೆ ಹೊಂದಿದ್ದಾರೆ ಎಂದು ಹೇಳಿದರು.
ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ ಮಾಡುವುದಾಗಿ ಪ್ರಧಾನಿ ಮೋದಿ ಈಗಾಗಲೇ ಘೋಷಿಸಿರುವುದು ತಿಳಿದ ಸಂಗತಿಯೇ. ಸದ್ಯ ಮೋದಿ ಅವರು ಪೋಲೆಂಡ್‌ಗೆ ಭೇಟಿ ನೀಡಿದ್ದು, ಅವರನ್ನು ಸ್ಪಿಕ್ಜೋ ಭೇಟಿಯಾಗಿದ್ದಾರೆ.
ಮೋದಿ ಅವರೊಂದಿಗೆ ಮಾತನಾಡಿದ ನಂತರ ನನಗೆ ಧನಾತ್ಮಕ ಶಕ್ತಿಯ ಅನುಭವವಾಯಿತು. ಅಹಮದಾಬಾದ್‌ನಲ್ಲಿ ಬೃಹತ್ ಕ್ರೀಡಾಂಗಣ ನಿರ್ಮಾಣದ ಹಿಂದೆ ಅವರ ಶ್ರಮವಿದೆ. ಅಲ್ಲಿ ವಿಶ್ವಕಪ್ ಕೂಡ ಆಡಿದ್ದೆ. ಪ್ರಧಾನಿ ಮೋದಿಯವರಿಂದ ಭಾರತ ಬಲಿಷ್ಠವಾಗಿದೆ. ಪ್ರತಿಯೊಂದು ಕ್ರೀಡೆಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತ ಕಠಿಣ ಪ್ರಯತ್ನ ಮಾಡಬೇಕು. ಆ ಬಿಡ್ಡಿಂಗ್ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ನಾವು ಅದರಲ್ಲಿ ಕಬಡ್ಡಿಯನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಸ್ಪಿಕ್ಜೋ ಹೇಳಿದರು.
ಪೋಲಿಷ್ ಕಬಡ್ಡಿ ಫೆಡರೇಷನ್ ಸದಸ್ಯೆ ಅನ್ನಾ ಕಲ್ಬರ್ಕಸ್ಕಿ ಮಾತನಾಡಿ, ಕಬಡ್ಡಿಯನ್ನು ಮತ್ತಷ್ಟು ವಿಸ್ತರಿಸುವಲ್ಲಿ ಪ್ರಧಾನಿ ಮೋದಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪೋಲೆಂಡ್ ಯುರೋಪ್‌ನಲ್ಲಿ ಕಬಡ್ಡಿಯನ್ನು ಪರಿಚಯಿಸಿದ್ದಕ್ಕೆ ಮೋದಿ ಹೆಮ್ಮೆ ಪಡುತ್ತಾರೆ ಎಂದರು.