ತಿರುವನಂತಪುರಂ; ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಸ್ವಾತಂತ್ರ್ಯೋತ್ಸವ ಪರೇಡ್ ಅನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ವಯನಾಡ್ ದುರಂತದ ಹಿನ್ನೆಲೆಯಲ್ಲಿ ಕೇರಳವು ಅತ್ಯಂತ ದುಃಖದ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ ಎಂದು ಹೇಳಿದ್ದಾರೆ.
ಕೇರಳ ಮಾತ್ರವಲ್ಲ ಇಡೀ ಭಾರತವೇ ಆ ದುಃಖದಲ್ಲಿ ಮುಳುಗಿರುವ ಹಂತವಿದು. ಆದರೆ ಇದನ್ನೂ ನಾವು ಮೀರಿ ಬದುಕಬೇಕು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗಳು ದೇಶದ ಸಾಮಾನ್ಯ ಉಳಿವಿಗಾಗಿ ಚಟುವಟಿಕೆಗಳಿಗೆ ಶಕ್ತಿ ತುಂಬಬೇಕು. ಸುಮಾರು ಎಂಟು ದಶಕಗಳ ಸ್ವಾತಂತ್ರ್ಯದ ಈ ಹಂತವು ಸಿಂಹಾವಲೋಕನವಾಗಬೇಕಾಗಿದೆ ಎಂದರು.
ಕಳೆದ 78 ವರ್ಷಗಳಲ್ಲಿ, ಭಾರತವು ತನ್ನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂರಕ್ಷಿಸಲು ಮತ್ತು ಸುಧಾರಿಸಲು ಸಮರ್ಥವಾಗಿದೆ. ನಮ್ಮ ದೇಶ ಪಡೆದ ಕಾಲಘಟ್ದಲ್ಲೇ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಪರಿಸ್ಥಿತಿ ಬಂದಿದೆ. ಆದರೆ ಇಲ್ಲಿ ಸವಾಲಿನ ಹಂತದಲ್ಲಿ, ಇಡೀ ಭಾರತೀಯ ಜನರು ಎಚ್ಚರದಿಂದ ನಿಂತಿದ್ದಾರೆ. ಇಂತಹ ಎಚ್ಚರಿಕೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಎಂಬುದನ್ನು ಪ್ರತಿ ಸ್ವಾತಂತ್ರ್ಯ ದಿನವು ನೆನಪಿಸುತ್ತದೆ ಎಂದು ಸೂಚಿಸಿದರು.
ಇಂದು ಭಾರತವು ಸಾಕ್ಷರತೆ, ಶಿಕ್ಷಣ, ಆರೋಗ್ಯ, ಹಸಿವು, ವಸತಿ, ಕೃಷಿ, ಉತ್ಪಾದನೆ, ಕೈಗಾರಿಕೆ, ಸೇವೆಗಳು ಮತ್ತು ಆರ್ಥಿಕ ರಚನೆಯಂತಹ ಹಲವು ಕ್ಷೇತ್ರಗಳಲ್ಲಿ ಉತ್ತಮವಾಗಿದೆ. ಭಾರತವು ಐಟಿ ಮತ್ತು ಸ್ಟಾರ್ಟ್‍ಅಪ್‍ಗಳ ಕೇಂದ್ರವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವು ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ಪ್ರತಿಷ್ಠಿತ ಸಾಧನೆಗಳನ್ನು ಮಾಡಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.