ನವದೆಹಲಿ: ಅತ್ಯಾಚಾರಿಗಳ ವಿಚಾರಣೆ ಮತ್ತು ಶಿಕ್ಷೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಹೊಸ ಮಸೂದೆಯನ್ನು ಪರಿಚಯಿಸಲು ತೃಣಮೂಲ ಕಾಂಗ್ರೆಸ್‌ನ ನಾಯಕ ಅಭಿಷೇಕ್ ಬ್ಯಾನರ್ಜಿ ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ. ಲೈಂಗಿಕ ಅಪರಾಧಿಗಳನ್ನು ಗಲ್ಲಿಗೆ ಹಾಕುವ ಮೂಲಕ ಅಥವಾ ಕಾನೂನು ಜಾರಿ ಸಂಸ್ಥೆಗಳಿಂದ ಎನ್‌ಕೌಂಟರ್ ಮಾಡುವ ಮೂಲಕ ಅವರು ಮರಣಕ್ಕೆ ಅರ್ಹರು ಎಂದಿದ್ದಾರೆ.
ಕೋಲ್ಕತಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇತ್ತೀಚಿಗೆ ವೈದ್ಯರೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೈಂಗಿಕ ದೌರ್ಜನ್ಯ ಪ್ರಕರಣಗಳ ಕಾನೂನು ಪ್ರಕ್ರಿಯೆಯನ್ನು ಏಳು ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ನಾತಕೋತ್ತರ ತರಬೇತಿ ವೈದ್ಯರ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಬೀದಿ ಪ್ರತಿಭಟನೆಗಳ ಬದಲು, ಇಂತಹ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸುವ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರವನ್ನು ಬಿಜೆಪಿ ಒತ್ತಾಯಿಸಬೇಕು. ಅಂತಹ ಕಾನೂನನ್ನು ಸಂಸತ್ತಿಗೆ ತಂದರೆ ತೃಣಮೂಲ ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಅಭಿಷೇಕ್ ಬ್ಯಾನರ್ಜಿ ಮಾಧ್ಯಮಗಳಿಗೆ ತಿಳಿಸಿದರು.
ವಿಚಾರಣೆಯ ಅವಧಿಯನ್ನು ನಿಗದಿಪಡಿಸುವುದರಿಂದ ತೆರಿಗೆದಾರರ ಹಣ ಉಳಿತಾಯವಾಗಲಿದೆ. ಸಮಾಜದಲ್ಲಿ ಬದುಕಲು ಅರ್ಹರಲ್ಲದ ಈ ಅತ್ಯಾಚಾರಿಗಳು ಕಾನೂನು ಮರಣದಂಡನೆ ಅಥವಾ ಎನ್‌ಕೌಂಟರ್‌ಗಳ ಮೂಲಕ ತಕ್ಷಣದ ಮತ್ತು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಹತ್ರಾಸ್, ಉನ್ನಾವೋ, ಮಣಿಪುರ, ದೆಹಲಿಯ ನಿರ್ಭಯಾ ಪ್ರಕರಣ ಮತ್ತು ಪಶ್ಚಿಮ ಬಂಗಾಳದ ಘಟನೆಗಳಂತಹ ಪ್ರಕರಣಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯುವಲ್ಲಿ ರಾಜಕೀಯ ಪಕ್ಷಗಳ ವೈಫಲ್ಯವನ್ನು ಒಪ್ಪಿಕೊಂಡ ಬ್ಯಾನರ್ಜಿ, ನ್ಯಾಯ ವ್ಯವಸ್ಥೆಯಲ್ಲಿ ಸುಧಾರಣೆಗೆ ಕರೆ ನೀಡಿದರು.