ನವದೆಹಲಿ: 'ತಮ್ಮ ಧರ್ಮೋಪದೇಶ ಹಾಗೂ ಕಾರ್ಯಗಳ ಮೂಲಕ ಸಮಾಜದಲ್ಲಿ ಗೌರವ ಸಂಪಾದಿಸುವ ನೀವೊಬ್ಬ ಸಂತರು. ನೀವೇಕೆ ಇಷ್ಟೊಂದು ಚಿಂತೆಗೀಡಾಗಿದ್ದೀರಿ? ಸರ್ವಸಂಗ ಪರಿತ್ಯಾಗಿಗಳಾದ ಸಂತರು ಯಾವುದಕ್ಕೂ ಚಿಂತಿಸಬಾರದು. ಸಂತರ ಮಾನಹಾನಿ ಸಾಧ್ಯವೇ ಇಲ್ಲ' ಎಂದು ಉತ್ತರಾಖಂಡದ ಜ್ಯೋತಿರ್ ಪೀಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಗೆ ದೆಹಲಿ ಹೈಕೋರ್ಟ್ ಹೇಳಿದೆ.
ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಜ್ಯೋತಿರ್ಮಠ ಟ್ರಸ್ಟ್‌ನ ಸ್ವಾಮಿ ಗೋವಿಂದಾನಂದ ಸರಸ್ವತಿ ವಿರುದ್ಧ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾ. ನವೀನ್ ಚಾವ್ಲಾ, 'ಮೇಲ್ನೋಟಕ್ಕೆ ಇದೊಂದು ಮಾನಹಾನಿ ಹೇಳಿಕೆಯೇ ಅಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ಹೊರಡಿಸಲಾಗದು' ಎಂದಿದ್ದಾರೆ.
'ಹೇಳಿಕೆಯು ಕೆಟ್ಟ ಅಭಿರುಚಿಯುಳ್ಳದ್ದು. ಬಹುಷಃ ಅವರು ಹತಾಶೆಯಿಂದ ಈ ಹೇಳಿಕೆ ನೀಡಿರಬೇಕು. ಆದರೆ ಅದರಲ್ಲಿ ಮಾನಹಾನಿಯಾಗುವಂತದ್ದು ಏನೂ ಇಲ್ಲ' ಎಂದು ಪೀಠ ಅಭಿಪ್ರಾಯಪಟ್ಟಿತು.
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಎದುರುದಾರರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಆ. 29ಕ್ಕೆ ಮುಂದೂಡಿದೆ.
ಜ್ಯೋತಿರ್‌ಮಠ ಟ್ರಸ್ಟ್‌ನ ಗೋವಿಂದಾನಂದ ಸರಸ್ವತಿ ಅವರು ತನ್ನ ಹಾಗೂ ಇತರ ಸಂಸ್ಥೆಗಳ ವಿರುದ್ಧ ಜುಲೈನಲ್ಲಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ದೂರು ಸಲ್ಲಿಸಿದ್ದರು.
ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠಾಪನಾ ಸಮಾರಂಭ ಆಹ್ವಾನವನ್ನು ಅವಿಮುಕ್ತೇಶ್ವರಾನಂದ ಸರಸ್ವತಿ ತಿರಸ್ಕರಿಸಿದ್ದರು.