ತಿರುವನಂತಪುರಂ: ದೇವರನಾಡು ಕೇರಳದ ವಯನಾಡುವಿನಲ್ಲಿ ಸಂಭವಿಸಿದ ಭೂಕುಸಿತ ದುರಂತಕ್ಕೆ ಗಜರಾಜನ ಶಾಪವೇ ಕಾರಣವೇ? ಆನೆಗಳ ಶಾಪದಿಂದ ಭೂಕುಸಿತಕ್ಕೆ ಸಿಲುಕಿ ಗ್ರಾಮಗಳು ಕೊಚ್ಚಿ ಹೋಗಿದೆಯೇ? ಸದ್ಯ ಇಂಥದ್ದೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆಗುತ್ತಿದೆ.
ನಿಮಗೆ ಗೊತ್ತಿರಬಹುದು ನಾಲ್ಕು ವರ್ಷಗಳ ಹಿಂದೆ ಆಹಾರ ಅರಸಿ ನಾಡಿಗೆ ಬಂದ ಗರ್ಭಿಣಿ ಆನೆಗೆ ಸಿಡಿಮದ್ದು ಮಿಶ್ರಿತ ಅನಾನಸ್ ಹಣ್ಣನ್ನು ನೀಡಲಾಗಿತ್ತು. ಅದನ್ನು ತಿನ್ನುವಾಗ ಸ್ಫೋಟಗೊಂಡು ತೀವ್ರ ನೋವಿನಿಂದ ಆನೆ ಮೃತಪಟ್ಟಿತು. ಇದೀಗ ಆನೆಗೆ ಹಣ್ಣನ್ನು ಆ ಕೊಟ್ಟ ಗ್ರಾಮವೇ ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿದೆ ಎಂಬ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಆನೆಗಳ ಶಾಪ ನಿಜಕ್ಕೂ ಆ ಗ್ರಾಮಗಳ ಜನರ ಸಾವಿಗೆ ಕಾರಣವಾಯಿತೇ? ಈಗ ನಡೆಯುತ್ತಿರುವ ಪ್ರಚಾರದ ನೈಜತೆ ಏನೆಂಬದನ್ನು ನಾವೀಗ ನೋಡೋಣ.
ಅಂದು ನಡೆದಿದ್ದೇನು?
ಸುಮಾರು 4 ವರ್ಷಗಳ ಹಿಂದೆ ಮಲ್ಲಪ್ಪುರಂ ಗ್ರಾಮದ ಜನರು ಅತ್ಯಂತ ಕ್ರೂರವಾಗಿ ವರ್ತಿಸಿದ್ದರು. ಹೆಣ್ಣು ಆನೆಯೊಂದು ನದಿ ಪಾತ್ರದಲ್ಲಿ ಆಹಾರ ಅರಸಿ ಗ್ರಾಮಕ್ಕೆ ಬಂದಿತ್ತು. ಯಾರಿಗೂ ಏನೂ ಮಾಡದೆ ಅದು ತನ್ನ ದಾರಿಯಲ್ಲಿ ಸಾಗುತ್ತಿದ್ದಾಗ ಕೆಲವು ಸ್ಥಳೀಯರು ಅನಾನಸ್ ಹಣ್ಣನ್ನು ನೀಡಿದ್ದರು. ಆದರೆ ಆ ಅನಾನಸ್‌ನಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು. ಅನುಮಾನ ಎಂಬುದೇ ಗೊತ್ತಿರದ ಮೂಕ ಜೀವಿ ಆ ದುಷ್ಟ ಜನರನ್ನು ನಂಬಿ, ಅನಾನಸ್ ಹಣ್ಣನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿತು. ತಕ್ಷಣವೇ ದೊಡ್ಡ ಸದ್ದಿನೊಂದಿಗೆ ಹಣ್ಣುಗಳು ಸ್ಫೋಟಗೊಂಡಿತು. ಏಕಾಏಕಿ ಸ್ಫೋಟಗೊಂಡಿದ್ದರಿಂದ ಅದರ ತೀವ್ರತೆಗೆ ಮೂಕ ಪ್ರಾಣಿಯ ಬಾಯಿಯಿಂದ ರಕ್ತ ಹರಿಯಿತು. ಅಂತಹ ನೋವಿನಲ್ಲೂ ಅದು ಮೋಸ ಮಾಡಿದ ಕಿಡಿಗೇಡಿಗಳ ಮೇಲೆ ದಾಳಿ ಮಾಡಲಿಲ್ಲ. ಬಾಯಿಯಿಂದ ರಕ್ತ ಬರುತ್ತಲೇ ಇತ್ತು. ಅದೇ ನೋವಿನಲ್ಲಿ ಆನೆ ಊರು ಬಿಟ್ಟಿತು.
ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನೊಂದಿಗೆ ತೀವ್ರ ಹಸಿವು ಒಂದೆಡೆಯಾದರೆ, ಸ್ಫೋಟದಿಂದ ಸಂಭವಿಸಿದ ನೋವು ಇನ್ನೊಂದೆಡೆ. ಏನು ಮಾಡಬೇಕೆಂದು ತೋಚದೆ ಮೂಕ ಜೀವಿ ನದಿಯ ನೀರಿನ ಒಳಗಡೆ ಇಳಿಯಿತು. ನೀರಿನಲ್ಲಾದರೂ ನೋವು ಕಡಿಮೆಯಾಗುತ್ತಾ ಅನ್ನೋ ಆಸೆ ಆ ಆನೆಯದ್ದು. ವೆಲ್ಲಿಯರ್ ನದಿಯಲ್ಲೇ ಆನೆ ಉಳಿದುಕೊಂಡಿತು. ಇತ್ತ ಆನೆ ಸ್ಫೋಟಕಗಳನ್ನು ತಿಂದಿರುವ ವಿಷಯ ಅರಣ್ಯ ಇಲಾಖೆ ತಿಳಿಯಿತು. ತಕ್ಷಣ ಅರಣ್ಯ ಸಿಬ್ಬಂದಿ, ಸುರೇಂದರ್ ಮತ್ತು ನೀಲಕಂಠನ್ ಎಂಬ ಇನ್ನೆರಡು ಆನೆಗಳನ್ನು ತಂದು ನದಿಯಿಂದ ಆನೆಯನ್ನು ಹೊರತೆಗೆಯಲು ಯತ್ನಿಸಲಾಯಿತು. ಆದರೆ, ಗಾಯದ ನೋವು ಸಹಿಸಲಾಗದೆ ಆನೆ ಅಲ್ಲೇ ಉಳಿದುಕೊಂಡಿತು. ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಯಿತು. ಆದರೆ, ಅಂತಿಮವಾಗಿ 2020ರ ಮೇ 27ರಂದು ಸಂಜೆ 4 ಗಂಟೆಗೆ ಆನೆ ಮೃತಪಟ್ಟಿರುವುದು ಕಂಡುಬಂತು. ತನ್ನ ಗರ್ಭದಲ್ಲಿರುವ ಮಗುವಿನೊಂದಿಗೆ ಹೆಣ್ಣಾನೆ ಇಹಲೋಕ ತ್ಯಜಿಸಿತು.
ಅಂದಿನ ಮಲ್ಲಪ್ಪುರಂ ಅರಣ್ಯ ಇಲಾಖೆ ಅಧಿಕಾರಿ ಮೋಹನ್ ಕೃಷ್ಣನ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಹೃದಯವಿದ್ರಾವಕ ಘಟನೆಯನ್ನು ಬಹಿರಂಗಪಡಿಸಿದರು. ಅಲ್ಲದೆ, ಸತ್ತ ಆನೆಯನ್ನು ಹೊರತಂದು ಪರೀಕ್ಷಿಸಿದಾಗ ಅದರ ಗರ್ಭದಲ್ಲಿ ಮರಿ ಆನೆ ಇರುವುದು ವೈದ್ಯರಿಗೆ ಗೊತ್ತಾಯಿತು. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಅಂತಿಮ ಸಂಸ್ಕಾರ ನೆರವೇರಿಸಿದರು.
ಇದೀಗ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಎಲ್ಲ ಕೆಲ ರಾಜ್ಯದವರು ವಯನಾಡು ಘಟನೆಗೆ ಸತ್ತ ಹೆಣ್ಣಾನೆಯ ಶಾಪವೇ ಕಾರಣ ಎಂದು ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಆನೆ ಬಲಿಯಾದ ಊರಿನಲ್ಲಿ ಪ್ರವಾಹ ಬಂದಿತ್ತು. ಅಲ್ಲಿದ್ದವರೆಲ್ಲ ಸತ್ತು ಹೋದರು. ಈ ವಿನಾಶಕ್ಕೆ ಕಾರಣ ಆ ಊರಿನವರು. ಏಕೆಂದರೆ, ಆನೆಯನ್ನು ಕೊಂದಿದ್ದೇ ಇದಕ್ಕೆಲ್ಲ ಕಾರಣ ಎನ್ನುತ್ತಿದ್ದಾರೆ. ಆದರೆ, ಇದನ್ನು ಕೆಲ ನೆಟ್ಟಿಗರು ತಿರಸ್ಕರಿಸಿದ್ದಾರೆ. ಭೂಕುಸಿತ ಸಂಭವಿಸಿರುವುದು ವಯನಾಡುವಿನಲ್ಲಿ ಆದರೆ, ಆನೆ ಸತ್ತಿದ್ದು ಮಲಪ್ಪುರಂನಲ್ಲಿ. ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಗೂ ಈಗಿನ ದುರಂತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆನೆಯನ್ನು ಕೊಂದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ ಆದರೆ, ಘಟನೆ ನಡೆದ ಗ್ರಾಮಕ್ಕೂ ಈಗ ದುರಂತ ಸಂಭವಿಸಿರುವ ಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ. ವಯನಾಡು ದುರಂತದ ಬಗ್ಗೆ ಅನಗತ್ಯವಾಗಿ ಸುಳ್ಳು ಪ್ರಚಾರ ಮಾಡುತ್ತಿರುವುದು ನೋವಿನ ಸಂಗತಿ ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.