ನವದೆಹಲಿ: ಜಿ20 ಸದಸ್ಯ ರಾಷ್ಟ್ರಗಳ ಪೈಕಿ ಭಾರತವು ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಹಿಂದುಳಿದಿದೆ. ಜನಸಂಖ್ಯೆ ಬೆಳವಣಿಗೆಗೆ ಅನುಗುಣವಾಗಿ 2030ರ ವೇಳೆಗೆ ಹೆಚ್ಚುವರಿಯಾಗಿ 14.8 ಕೋಟಿಯಷ್ಟು ಉದ್ಯೋಗ ಸೃಷ್ಟಿಸುವ ಅನಿವಾರ್ಯತೆ ಇದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಶನಿವಾರ ಹೇಳಿದ್ದಾರೆ.
ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ 'ವಜ್ರ ಮಹೋತ್ಸವ'ದಲ್ಲಿ ಪಾಲ್ಗೊಂಡ ಅವರು, 'ಭಾರತದ ಜನಸಂಖ್ಯಾ ಬೆಳವಣಿಗೆ ದರ 2010ರಿಂದ ಸರಾಸರಿ ಶೇ 6.6ರಷ್ಟಿದೆ. ಆದರೆ, ಉದ್ಯೋಗ ಸೃಷ್ಟಿ ಪ್ರಮಾಣ ಶೇ 2 ರಷ್ಟಿದೆ. ಹಾಗಾಗಿ, ಭಾರತದ ಉದ್ಯೋಗ ಸೃಷ್ಟಿ ದರವು ಜಿ20 ಗುಂಪಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕೆಳಮಟ್ಟದಲ್ಲಿದೆ' ಎಂದಿದ್ದಾರೆ.
'ಭಾರತದ ಜನಸಂಖ್ಯಾ ಬೆಳವಣಿಗೆಯ ಮುನ್ನೋಟವನ್ನು ಗಮನಿಸಿದರೆ, 6 ಕೋಟಿಯಿಂದ 14.8 ಕೋಟಿಯಷ್ಟು ಹೆಚ್ಚುವರಿ ಉದ್ಯೋಗಗಳನ್ನು 2030ರ ವೇಳೆಗೆ ಸೃಷ್ಟಿಸಬೇಕಿದೆ. ಈಗಾಗಲೇ ನಾವು 2024ರಲ್ಲಿದ್ದೇವೆ. ಕಡಿಮೆ ಅವಧಿಯಲ್ಲಿ ಸಾಕಷ್ಟು ಉದ್ಯೋಗಗಳನ್ನು ಸೃಜಿಸಬೇಕಿದೆ' ಎಂದು ಉಲ್ಲೇಖಿಸಿದ್ದಾರೆ.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಷ್ಕರಣೆಯಾಗಬೇಕಿದೆ ಎಂದು ಸಲಹೆ ನೀಡಿರುವ ಗೀತಾ, ಇದರಿಂದ ಔದ್ಯೋಗಿಕ ಕೌಶಲಗಳ ಸುಧಾರಣೆ ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.