ಮಧೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಯೋಗದೊಂದಿಗೆ ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆದ ಎರಡು ದಿನಗಳ ತೆಂಕುತಿಟ್ಟು ಯಕ್ಷ ಮಾರ್ಗ- ಶಿಬಿರ- ಯಕ್ಷಗಾನ ಪ್ರದರ್ಶನ ನಿನ್ನೆ ಸಂಪನ್ನಗೊಂಡಿತು. ತೆಂಕುತಿಟ್ಟು ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಎರಡು ದಿನಗಳು ಪ್ರಾತ್ಯಕ್ಷಿಕೆಗಳು ನಡೆದವು. 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದರು. ಯಕ್ಷಗಾನದ ಸಭಾ ವಂದನೆ -ಸಭಾ ಕಲಸು ತ್ತಿತ್ತಿತೈಯ ನಾಟ್ಯ ಕುಣಿತ ಇತ್ಯಾದಿಗಳ ಕುರಿತಾಗಿ ಮಾರ್ಗದರ್ಶನ ನೀಡಿದರು. ಜೊತೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಾತ್ಯಕ್ಷಿಕೆಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು.
ಸಮಾರೋಪ ಸಮಾರಂಭಕ್ಕೆ ಮೊದಲು ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿಯನ್ನು ಯಕ್ಷಗಾನ ವಿದ್ವಾಂಸ, ಪ್ರಸಂಗ ಕರ್ತ , ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಡಿಎಸ್ ರವರಿಗೆ ನೀಡಿ ಗೌರವಿಸಲಾಯಿತು..ಮತ್ತು ಸದಸ್ಯತ್ವ ನೋಂದಾವಣಾ ಅಭಿಯಾನದ ಅಂಗವಾಗಿ ಯಚ್. ಕೃಷ್ಣ ಭಟ್ ಮಂಗಳೂರು ಇವರಿಗೆ ಪೋಷಕ ಗೌರವ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ಶಾಸಕ ಎನ್.ಎ .ನೆಲ್ಲಿಕುನ್ನು ಅವರು ಭಾಗವಹಿಸಿದ್ದರು. .ಯಕ್ಷಗಾನ ಕ್ಷೇತ್ರಕ್ಕೆ ಸಿರಿಬಾಗಿಲು ಪ್ರತಿಷ್ಠಾನದ ಕೊಡು ಅಪಾರವಾದುದು. ಕೇರಳ ಸರ್ಕಾರದಿಂದಲೂ ಪ್ರತಿಷ್ಠಾನಕ್ಕೆ ಆರ್ಥಿಕ ಸಹಕಾರ ಸಿಗುವಂತೆ ವಿಧಾನಸಭೆಯಲ್ಲಿ ಪ್ರಸ್ಥಾಪಿಸುವುದಾಗಿ ಭರವಸೆಗಳ ನುಡಿಗಳನ್ನಾಡಿದರು. ಪ್ರತಿಷ್ಠಾನಕ್ಕೆ ಬರುವ ರಸ್ತೆಯನ್ನು ದುರಸ್ತಿಗೊಳಿಸುವಲ್ಲಿ ಸಹಕರಿಸುತ್ತೇನೆ ಎಂದು ಆಶ್ವಾಸನೆಯಿತ್ತರು. ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮವು ಗಮನಾರ್ಹವಾಗಿದೆ, ಔಚಿತ್ಯಪೂರ್ಣವಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾರ್ ನಮ್ರತಾ ಅವರು ವಹಿಸಿ, ಗಡಿನಾಡು ಕಾಸರಗೋಡಿನಲ್ಲಿ ಇಂತಹ ಚಟುವಟಿಕೆಗೆ ಅಕಾಡೆಮಿ ಯಾವತ್ತೂ ನಿಮ್ಮ ಜೊತೆ ಇದೆ ಎಂದು ಭರವಸೆ ಕೊಟ್ಟರು. ಮುಖ್ಯ ಅತಿಥಿಗಳಾಗಿ ಕೃಷ್ಣಪ್ಪ ಕೀನ್ಯಾ ಸದಸ್ಯರು ಯಕ್ಷಗಾನ ಅಕಾಡೆಮಿ ಭಾಗವಹಿಸಿದ್ದರು. ಗಡಿನಾಡು ಕಾಸರಗೋಡಿನ ಏಕೈಕ ಅಕಾಡೆಮಿಯ ಸದಸ್ಯರಾದ ಸತೀಶ ಅಡಪ ಸಂಕಬೈಲು ಅವರು ನಿರೂಪಿಸಿದರು .ಜಗದೀಶ್ ಕೆ ಕೂಡ್ಲು ಮುಂತಾದವರು ಸಭಾ ಕಾರ್ಯಕ್ರಮದಲ್ಲಿ ಸಹಕರಿಸಿದರು.