ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ ಜಿಲ್ಲೆಯ ಕಾಡೊಂದರಲ್ಲಿ ಭಾನುವಾರ ಬೆಳಿಗ್ಗೆ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಹೃಸ್ವ ಅವಧಿಯ ಗುಂಡಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ ಜಿಲ್ಲೆಯಲ್ಲಿರುವ ಮಚಲಿ ಮಾತಾ ದೇಗುಲಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ತೊಂದರೆಯುಂಟಾಗಿಲ್ಲ. ಸೂಕ್ತ ಭದ್ರತೆಯೊಂದಿಗೆ ಅವರು ದೇಗುಲಕ್ಕೆ ತೆರಳಿದ್ದಾರೆ. ಭಯಪಡಬೇಕಾದ ಅಗತ್ಯ ಇಲ್ಲ ಎಂದು ಅವರು ತಿಳಿಸಿದ್ದಾರೆ.
ನೌನಟ್ಟ, ನಾಗಸೇನಿ ಪಿಯಾಸ್ ಹಾಗೂ ಸಮೀಪದ ಸ್ಥಳಗಳಲ್ಲಿ ಉಗ್ರರ ಚಲನವನದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸೇನೆ ಹಾಗೂ ಅರೆಸೇನಾ ಪಡೆಯ ಬೆಂಬಲದೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಭದ್ರತಾ ಪಡೆಗಳು ನಿಯೋಜನೆಗೊಂಡಿದ್ದು, ಸಮೀಪದ ದಟ್ಟ ಕಾಡಿನಲ್ಲಿ ತಪ್ಪಿಸಿಕೊಂಡಿರುವ ಭಯೋತ್ಪಾದಕರ ಪತ್ತೆ ಕಾರ್ಯ ನಡೆಯುತ್ತಿದೆ.