ಬದಿಯಡ್ಕ: ಅದ್ವೈತ ಸಿದ್ಧಾಂತಗಳ ಪ್ರಚಾರಕ್ಕಾಗಿ ಮಠಗಳು ಸ್ಥಾಪಿತವಾಗಿವೆ. ಜನರ ಸಂಸ್ಕøತಿ, ಆಚಾರ ವಿಚಾರಗಳು ಪ್ರಕಟವಾಗಲು ದೇವಸ್ಥಾನ, ಮಠ ಹಾಗೂ ಶಾಲೆ ಅಗತ್ಯ. ಈ ತ್ರಿವೇಣಿ ಸಂಗಮವು ಎಡನೀರಿನಲ್ಲಿ ಇದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಹೇಳಿದರು.
ಅವರು ಗುರುವಾರ ಎಡನೀರು ಮಠದಲ್ಲಿ ಶ್ರೀಮಠದ ಪೂರ್ವ ವ್ಯವಸ್ಥಾಪಕರಾಗಿದ್ದ ಎಡನೀರಿನ ರಾಮಕೃಷ್ಣ ರಾವ್‍ರ ಸ್ಮರಣಾರ್ಥ ನೀಡಿದ ಸ್ಮೃತಿ ಗೌರವದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಎಡನೀರು ಮಠದಲ್ಲಿ ಅಧಿಕಾರವನ್ನು ವಹಿಸಿಕೊಂಡ ರಾಮಕೃಷ್ಣ ರಾವ್‍ರೊಂದಿಗೆ ಯಕ್ಷತಂಡವನ್ನು ಕಟ್ಟಿರುವ ನೆನಪು ಇನ್ನೂ ಹಸಿರಾಗಿದೆ. ಬ್ರಹ್ಮೈಕ್ಯ ಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಅನುಗ್ರಹದೊಂದಿಗೆ ಪರಸ್ಪರ ವಿಶ್ವಾಸದಿಂದ ಅನೇಕ ಕಾರ್ಯಗಳನ್ನು ಜೊತೆಯಾಗಿ ಮಾಡಿದ್ದೇವೆ. ಎಡನೀರು ಮಠದ ಸಂಪರ್ಕ ಬಂದರೆ ಏನೋ ಒಂದು ಹುರುಪು ಬರುತ್ತದೆ ಎಂದರು.
ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಸ್ಮøತಿ ಗೌರವವನ್ನು ನೀಡಿ ಅಡ್ಕ ಗೋಪಾಲಕೃಷ್ಣ ಭಟ್ಟರನ್ನು ಆಶೀರ್ವದಿಸಿ ಅನುಗ್ರಹ ವಚನಗಳನ್ನು ನೀಡಿದರು. ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯರು ಸಂಸ್ಮರಣಾ ಭಾಷಣದಲ್ಲಿ ಜೀವನವಿಡೀ ಸೇವೆಯನ್ನು ಸಲ್ಲಿಸಿ ಶ್ರೀಮಠದ ಶ್ರೇಯಸ್ಸಿಗೆ ನಿಃಸ್ವಾರ್ಥವಾಗಿ ದುಡಿದ ಶಿಷ್ಯಂದಿರಲ್ಲಿ ರಾಮಕೃಷ್ಣ ರಾವ್ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಹಿರಿಯ ಗುರುಗಳ ಅಪೇಕ್ಷೆಯಂತೆ ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ ಎಂದರು.
ಕಾಟುಕೊಚ್ಚಿ ಕುಂಞಕೃಷ್ಣನ್ ಮಾತನಾಡಿ ರಾಜಕೀಯವಾಗಿಯೂ ಉತ್ತಮ ಹಿಡಿತವನ್ನು ಸಾಧಿಸಿದ್ದ ರಾಮಕೃಷ್ಣ ರಾಯರು ನಾಡಿನ ಅಭಿವೃದ್ಧಿಗೆ ಪೂರಕವಾಗಿ ದುಡಿದಿದ್ದಾರೆ ಎಂದು ಅವರೊಂದಿಗಿನ ತನ್ನ ಒಡನಾಟವನ್ನು ಹಂಚಿಕೊಂಡರು. ಶಾಲಿಕಾ ಕೃಷ್ಣ ಪ್ರಾರ್ಥಿಸಿದರು. ಪದ್ಮಾ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಮತಾ ಪ್ರಕಾಶ್ ಅಭಿನಂದನಾ ಪತ್ರ ವಾಚಿಸಿದರು. ರಾಧಾಕೃಷ್ಣ ಆಚಾರ್ಯ, ಪ್ರಕಾಶ ಬೈಪಡಿತ್ತಾಯ ಉಪಸ್ಥಿತರಿದ್ದರು. ಸತೀಶ್ ರಾವ್ ವಂದಿಸಿದರು. ಸರ್ವಮಂಗಲ ರಾವ್ ನಿರೂಪಿಸಿದರು. ನಂತರ ಪುತ್ತೂರಿನ ತೆಂಕಿಲ ದಿಃಶಕ್ತಿ ಮಹಿಳಾ ಯಕ್ಷಬಳಗದ ಸದಸ್ಯೆಯರಿಂದ ಯಕ್ಷಗಾನ ತಾಳಮದ್ದಳೆ ವಾಲಿಮೋಕ್ಷ ಜರುಗಿತು.