HEALTH TIPS

ಒಳಮೀಸಲು: ರಾಜ್ಯಕ್ಕೆ ಅಧಿಕಾರ, ಚಿನ್ನಯ್ಯ ಪ್ರಕರಣದ ತೀರ್ಪು ರದ್ದು

 ವದೆಹಲಿ: ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಉದ್ದೇಶದಿಂದ ಆ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಕಲ್ಪಿಸಲು, ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸಾರಿದೆ.

ಪರಿಶಿಷ್ಟ ಜಾತಿಗಳು ಸಾಮಾಜಿಕವಾಗಿ ಏಕರೂಪಿಯಾಗಿಲ್ಲ ಎಂದು ಏಳು ನ್ಯಾಯಮೂರ್ತಿಗಳ
ಸಂವಿಧಾನ ಪೀಠವು ಹೇಳಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಪೀಠದ ನೇತೃತ್ವ ವಹಿಸಿದ್ದರು. ಪೀಠವು 6:1ರ ಬಹುಮತದ ತೀರ್ಪು ನೀಡಿದೆ.

ಇ.ವಿ. ಚಿನ್ನಯ್ಯ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ, 'ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಅವಕಾಶ ಇಲ್ಲ, ಏಕೆಂದರೆ ಪರಿಶಿಷ್ಟ ಜಾತಿ ಎಂಬುದೇ ಒಂದು ಏಕರೂಪಿ ವರ್ಗ' ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ 2004ರಲ್ಲಿ ನೀಡಿದ್ದ ತೀರ್ಪನ್ನು ಏಳು ನ್ಯಾಯಮೂರ್ತಿಗಳ ಪೀಠವು ರದ್ದುಪಡಿಸಿದೆ.

'ಸಂವಿಧಾನದ 15ನೆಯ ಹಾಗೂ 16ನೆಯ ವಿಧಿಗಳ ಅಡಿಯಲ್ಲಿ ಇರುವ ಅಧಿಕಾರವನ್ನು ಬಳಸಿ ರಾಜ್ಯ ಸರ್ಕಾರಗಳು ಸಾಮಾಜಿಕ ಹಿಂದುಳಿದಿರುವಿಕೆಯ ಭಿನ್ನ ಮಟ್ಟವನ್ನು ಗುರುತಿಸಲು ಹಾಗೂ ಮೀಸಲಾತಿಯಂತಹ ವಿಶೇಷ ಅವಕಾಶಗಳನ್ನು ಕಲ್ಪಿಸಲು ಮುಕ್ತವಾಗಿವೆ' ಎಂದು ಸಿಜೆಐ ಚಂದ್ರಚೂಡ್ ಅವರು ತೀರ್ಪಿನಲ್ಲಿ ಹೇಳಿದ್ದಾರೆ.

'ಪರಿಶಿಷ್ಟ ಜಾತಿಗಳು ಏಕರೂಪಿ ಸಮುದಾಯ ಅಲ್ಲ ಎಂಬುದನ್ನು ಐತಿಹಾಸಿಕ ಹಾಗೂ ಅನುಭವಕ್ಕೆ ದಕ್ಕುವ ಸಾಕ್ಷ್ಯಗಳು ಹೇಳುತ್ತವೆ. ಹೀಗಾಗಿ, ರಾಜ್ಯಗಳು ಸಂವಿಧಾನದ 15(4), 16(4)ನೆಯ ವಿಧಿಯ ಅಡಿಯಲ್ಲಿ ಇರುವ ಅಧಿಕಾರವನ್ನು ಬಳಸಿ, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಬಹುದು. ಆದರೆ ಹಾಗೆ ಪ್ರತ್ಯೇಕಗೊಳಿಸುವುದಕ್ಕೆ ಸಕಾರಣ ಇರಬೇಕು' ಎಂದು ಅವರು ವಿವರಿಸಿದ್ದಾರೆ.

ಪೀಠವು ಒಟ್ಟು 565 ಪುಟಗಳ ತೀರ್ಪುಗಳನ್ನು ನೀಡಿದೆ. ಚಂದ್ರಚೂಡ್ ಅವರು ನ್ಯಾಯಮೂರ್ತಿ ಮಿಶ್ರಾ ಅವರ ಪರವಾಗಿ ತಾವೇ ತೀರ್ಪು ಬರೆದಿದ್ದಾರೆ. ನಾಲ್ವರು ನ್ಯಾಯಮೂರ್ತಿಗಳು ಇದಕ್ಕೆ ಸಹಮತದ ತೀರ್ಪು ಬರೆದಿದ್ದಾರೆ. ನ್ಯಾಯಮೂರ್ತಿ ತ್ರಿವೇದಿ ಅವರು ಭಿನ್ನಮತದ ತೀರ್ಪು ಬರೆದಿದ್ದಾರೆ.

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಾಗೂ ಯಾವುದೇ ಒಂದು ವರ್ಗಕ್ಕೆ ಹೆಚ್ಚಿನ ಮೀಸಲಾತಿ ಸೌಲಭ್ಯ ಕಲ್ಪಿಸುವ ತೀರ್ಮಾನವನ್ನು ನ್ಯಾಯಾಂಗವು ಪರಿಶೀಲನೆಗೆ ಒಳಪಡಿಸಲು ಅವಕಾಶ ಇದೆ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.

ಮೀಸಲಾತಿ ವಿಚಾರವಾಗಿ ಮಂಡಲ್‌ ತೀರ್ಪಿನಲ್ಲಿ ಹೇಳಿರುವ ಮಾತುಗಳನ್ನು ಉಲ್ಲೇಖಿಸಿರುವ ಪೀಠವು, ಒಳ ಮೀಸಲಾತಿಯು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಭಿನ್ನಮತದ ತೀರ್ಪು ಬರೆದಿರುವ ನ್ಯಾಯಮೂರ್ತಿ ತ್ರಿವೇದಿ ಅವರು ಸಂವಿಧಾನದ 341ನೆಯ ವಿಧಿಯ ಅಡಿಯಲ್ಲಿ ಅಧಿಸೂಚಿತವಾಗಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆ ತರುವ ಅಧಿಕಾರವು ರಾಜ್ಯಗಳಿಗೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯಗಳು ಜಾರಿಗೆ ತರುವ ಸದಾಶಯದ ಕ್ರಮಗಳು ಸಂವಿಧಾನ ವಿಧಿಸಿರುವ ಚೌಕಟ್ಟನ್ನು ಮೀರುವಂತೆ ಇಲ್ಲ ಎಂದು ಹೇಳಿದ್ದಾರೆ.

ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಜಾತಿಯೊಂದರ ಹೆಸರನ್ನು ಸೇರಿಸುವ ಅಥವಾ ಆ ಪಟ್ಟಿಯಿಂದ ಜಾತಿಯೊಂದರ ಹೆಸರನ್ನು ಹೊರಗೆ ತರುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ ಎಂದು ತ್ರಿವೇದಿ ಅವರು ಹೇಳಿದ್ದಾರೆ.

ಕೋರ್ಟ್‌ ಹೇಳಿದ ಪ್ರಮುಖ ಮಾತುಗಳು

*ಒಳಮೀಸಲು ಸೇರಿದಂತೆ ಸದಾಶಯದ ಯಾವುದೇ ಕ್ರಮದ ಉದ್ದೇಶವು ಹಿಂದುಳಿದಿರುವವರಿಗೆ ಸಮಾನ ಅವಕಾಶಗಳನ್ನು ನೀಡುವುದಾಗಿರಬೇಕು

*ಕೆಲವು ವರ್ಗಗಳಿಗೆ ಪ್ರಾತಿನಿಧ್ಯವು ಸರಿಯಾಗಿ ದೊರೆತಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರಗಳು ಒಳಮೀಸಲು ನೀಡಬಹುದು

*ಜಾತಿ ಅಥವಾ ಗುಂಪು ಹಿಂದುಳಿದಿರುವ ಕಾರಣದಿಂದಾಗಿ ಅದಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬುದನ್ನು ಸಾಬೀತು ಮಾಡಬೇಕು

*ಸರ್ಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯ ಸೂಕ್ತವಾಗಿ ಇಲ್ಲ ಎಂಬ ಬಗ್ಗೆ ಸರ್ಕಾರವು ದತ್ತಾಂಶ ಕಲೆಹಾಕಬೇಕು. ಏಕೆಂದರೆ ಸೂಕ್ತ ಪ್ರಾತಿನಿಧ್ಯ ಇಲ್ಲ ಎಂಬುದನ್ನು ಹಿಂದುಳಿದಿರುವಿಕೆಯ ಸೂಚಕವನ್ನಾಗಿ ಬಳಸಲಾಗುತ್ತದೆ

*ಒಳಮೀಸಲು ನೀಡುವಾಗ ರಾಜ್ಯಗಳು ಸಮರ್ಥನೀಯವಾದ ದತ್ತಾಂಶಗಳನ್ನು ಹೊಂದಿರಬೇಕೇ ಹೊರತು ತಮಗೆ ತೋಚಿದ ಬಗೆಯಲ್ಲಿ ಒಳಮೀಸಲು ನೀಡುವಂತಿಲ್ಲ.

ಜಾರಿಗೆ ಇದ್ದ ಅಡ್ಡಿ ನಿವಾರಣೆ:ಸಿದ್ದರಾಮಯ್ಯ

ಬೆಂಗಳೂರು: 'ಪರಿಶಿಷ್ಟರಲ್ಲಿ ಅತಿ ಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನಕ್ಕೆ ಇದ್ದ ಮುಖ್ಯ ಅಡ್ಡಿಯೊಂದು ನಿವಾರಣೆಯಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

'ಒಳಮೀಸಲಾತಿ ಕಲ್ಪಿಸುವ ಕುರಿತ ನ್ಯಾ.ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಲಾಗುವುದು. ಅಗತ್ಯ ಬಿದ್ದರೆ ಅದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಂಡು, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಸಮಾಲೋಚನೆ- ಸಂಧಾನದ ಮೂಲಕ ಸ್ಪಷ್ಟ
ನಿರ್ಧಾರ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

'ಸುಪ್ರೀಂ ಕೋರ್ಟ್‌ ನೀಡಿರುವ ಈ ತೀರ್ಪು ಐತಿಹಾಸಿಕವಾದುದು. ತೀರ್ಪಿನಲ್ಲಿರುವ ವಿವಾದಾತ್ಮಕ ಕೆನೆಪದರದ ಬಗೆಗಿನ ಅಂಶವೂ ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಕ್ರಮಕೈಗೊಳ್ಳಲಾಗುವುದು' ಎಂದಿದ್ದಾರೆ.

'ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಕಾಂಗ್ರೆಸ್ ಬದ್ಧ. ಹಿಂದೆ ಕಾಂಗ್ರೆಸ್ ‍ಪಕ್ಷ ಅಧಿಕಾರದಲ್ಲಿದ್ದಾಗಲೇ ರಚಿಸಿದ್ದ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗೆ ಸರ್ಕಾರ ಬದ್ಧವಾಗಿದೆ' ಎಂದಿದ್ದಾರೆ.

'ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಒಳಮೀಸಲಾತಿ ಬಗ್ಗೆ ಅವಸರದಲ್ಲಿ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ಜಾರಿ ಮಾಡಬಹುದು ಎಂದು ಕೇಂದ್ರ ಸರ್ಕಾರವೇ
ರಚಿಸಿದ್ದ ಉಷಾ ಮೆಹ್ರಾ ಸಮಿತಿ ಸ್ಪಷ್ಟವಾಗಿ ಹೇಳಿತ್ತು. ಹಾಗಿದ್ದರೂ, ಕೇಂದ್ರ ಸರ್ಕಾರ ಇಲ್ಲಿಯವರೆಗೆ ತೀರ್ಮಾನ ಕೈಗೊಳ್ಳದೆ ಮೂಲೆಗೆ ಸರಿಸಿತ್ತು' ಎಂದೂ ಅವರು ಹೇಳಿದ್ದಾರೆ.

'ಕೆನೆಪದರಕ್ಕೆ ಮೀಸಲಾತಿ ಬೇಡ'

ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳಲ್ಲಿ (ಎಸ್‌ಟಿ) ಕೆನೆಪದರವನ್ನು
ಗುರುತಿಸಲು ಮತ್ತು ಅವರಿಗೆ ಮೀಸಲಾತಿಯ ಸೌಲಭ್ಯವನ್ನು ನಿರಾಕರಿಸಲು ರಾಜ್ಯ ಸರ್ಕಾರಗಳು ನೀತಿಯೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಹೇಳಿದ್ದಾರೆ.

ಗವಾಯಿ ಅವರು ದಲಿತ ಸಮುದಾಯಕ್ಕೆ ಸೇರಿದವರು. ಅಲ್ಲದೆ ಅವರು ಮುಂದಿನ ವರ್ಷ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪದೋನ್ನತಿ ಹೊಂದಲಿದ್ದಾರೆ.

ಪರಿಶಿಷ್ಟ ಜಾತಿಗಳ ಒಳಮೀಸಲು ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸಾರಿರುವ ಸಂವಿಧಾನ ಪೀಠದಲ್ಲಿ ಒಬ್ಬರಾಗಿರುವ ನ್ಯಾಯಮೂರ್ತಿ ಗವಾಯಿ ಅವರು, ಸಹಮತದ ತಮ್ಮ ತೀರ್ಪನ್ನು ಪ್ರತ್ಯೇಕವಾಗಿ ಬರೆದಿದ್ದಾರೆ.

ಒಳಮೀಸಲು ‌ಕಲ್ಪಿಸುವ ಅಧಿಕಾರವು ರಾಜ್ಯಗಳಿಗೆ ಇದೆ ಎಂಬ ತೀರ್ಪು ನೀಡಿರುವ ಆರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳು, 'ಕೆನೆಪದರದ ವ್ಯಾಪ್ತಿಗೆ ಬರುವವರನ್ನು ಮೀಸಲಾತಿಯ ಸೌಲಭ್ಯದಿಂದ ಹೊರಗಿರಿಸಬೇಕು' ಎಂದಿದ್ದಾರೆ.

ಸಹಮತದ ತೀರ್ಪು ಬರೆದಿರುವ ನ್ಯಾಯಮೂರ್ತಿ ಗವಾಯಿ ಅವರು, 'ಸರ್ಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿರದ ಹಿಂದುಳಿದ ವರ್ಗದವರಿಗೆ ಆದ್ಯತೆಯನ್ನು ನೀಡುವುದು ಸರ್ಕಾರದ ಕರ್ತವ್ಯ' ಎಂದು ಹೇಳಿದ್ದಾರೆ.

'ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರವನ್ನು ಗುರುತಿಸಲು ರಾಜ್ಯ ಸರ್ಕಾರಗಳು ನೀತಿಯೊಂದನ್ನು ರೂಪಿಸಬೇಕು. ಸಂವಿಧಾನದಲ್ಲಿ ಹೇಳಿರುವ ನಿಜವಾದ ಸಮಾನತೆಯ ಗುರಿಯನ್ನು ಸಾಧಿಸಲು ಈ ಕ್ರಮದಿಂದ ಮಾತ್ರವೇ ಸಾಧ್ಯ ಎಂಬುದು ನನ್ನ ಅನಿಸಿಕೆ' ಎಂದು ಗವಾಯಿ ಅವರು ಹೇಳಿದ್ದಾರೆ.

ಮೀಸಲಾತಿಯ ಪ್ರಯೋಜನವನ್ನು ಪಡೆದಿರುವ, ಪರಿಶಿಷ್ಟ ಜಾತಿಗಳಿಗೆ ಸೇರಿದವರ ಮಕ್ಕಳನ್ನು ಹಾಗೂ ಮೀಸಲಾತಿಯ ಪ್ರಯೋಜನ ಪಡೆಯದ, ಪರಿಶಿಷ್ಟ ಜಾತಿಗಳಿಗೆ ಸೇರಿದವರ ಮಕ್ಕಳನ್ನು ಒಂದೇ ತಕ್ಕಡಿಯಲ್ಲಿ ತೂಗಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳಿಗೆ ಕೆನೆಪದರದ ತತ್ವವು ಅನ್ವಯ ಆಗಬೇಕು ಎಂಬ ವಿಚಾರದಲ್ಲಿ ತಾವು ಗವಾಯಿ ಅವರೊಂದಿಗೆ ಸಹಮತ ಹೊಂದಿರುವುದಾಗಿ ನ್ಯಾಯಮೂರ್ತಿ ವಿಕ್ರಮನಾಥ್ ಹೇಳಿದ್ದಾರೆ. ಆದರೆ, 'ಕೆನೆ ಪದರವನ್ನು ಗುರುತಿಸಲು ಬಳಸುವ ಮಾನದಂಡಗಳು ಒಬಿಸಿ ವರ್ಗಗಳಲ್ಲಿ ಕೆನೆಪದರ ಗುರುತಿಸಲು ಬಳಸುವ ಮಾನದಂಡಗಳಿಗಿಂತ ಭಿನ್ನವಾಗಿರಬಹುದು' ಎಂದಿದ್ದಾರೆ.

ಮೀಸಲಾತಿಯ ಪ್ರಯೋಜನವನ್ನು ಪಡೆದು, ಸಾಮಾನ್ಯ ವರ್ಗದವರ ಜೊತೆ ಸಮಾನವಾಗಿ ಹೆಜ್ಜೆಹಾಕುವ ಸಾಮರ್ಥ್ಯ ಪಡೆದಿರುವವರನ್ನು ಗುರುತಿಸಿ ಮೀಸಲಾತಿ ವ್ಯಾಪ್ತಿಯಿಂದ ಹೊರಗಿರಿಸಲು ಕಾಲಕಾಲಕ್ಕೆ ಕ್ರಮ ವಹಿಸಬೇಕು ಎಂದು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಹೇಳಿದ್ದಾರೆ.

'ಮೀಸಲಾತಿಯ ಸೌಲಭ್ಯವನ್ನು ಮೊದಲ ತಲೆಮಾರಿಗೆ ಮಾತ್ರ ಅಥವಾ ಒಂದು ತಲೆಮಾರಿಗೆ ಮಾತ್ರ ಸೀಮಿತವಾಗಿಸಬೇಕು. ಕುಟುಂಬದ ಯಾವುದೇ ಒಂದು ತಲೆಮಾರು ಮೀಸಲಾತಿಯ ಸೌಲಭ್ಯವನ್ನು ಪಡೆದುಕೊಂಡು ಉನ್ನತ ಸ್ಥಾನವನ್ನು ತಲುಪಿದೆ ಎಂದಾದರೆ, ಎರಡನೆಯ ತಲೆಮಾರಿಗೆ ಮೀಸಲಾತಿಯ ಸೌಲಭ್ಯವು ತಾರ್ಕಿಕವಾಗಿ ಸಿಗುವಂತಿರಬಾರದು' ಎಂದು ಮಿತ್ತಲ್ ವಿವರಿಸಿದ್ದಾರೆ.

ಎಸ್‌ಸಿ ಹಾಗೂ ಎಸ್‌ಟಿಗಳ ನಡುವೆ ಕೆನೆಪದರವನ್ನು ಗುರುತಿಸುವ ಕೆಲಸವು ರಾಜ್ಯ ಸರ್ಕಾರಗಳ ಪಾಲಿಗೆ ಸಾಂವಿಧಾನಿಕ ಅನಿವಾರ್ಯ ಆಗಬೇಕು ಎಂದು ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ಹೇಳಿದ್ದಾರೆ.

ನ್ಯಾಯಮೂರ್ತಿ ಗವಾಯಿ ಹೇಳಿದ್ದು...

*ಸಂವಿಧಾನ ಜಾರಿಗೆ ಬಂದು, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳ ಒಳಿತಿಗಾಗಿ ವಿಶೇಷ ಅವಕಾಶ
ಗಳನ್ನು ಕಲ್ಪಿಸಿ ಸರಿಸುಮಾರು 75 ವರ್ಷಗಳು ಸಂದಿವೆ

*ಎಸ್‌ಸಿಗಳ ನಡುವಿನ ಅಸಮಾನರನ್ನು ಸಮಾನ ನೆಲೆಯಲ್ಲಿ ಕಂಡಾಗ ಸಂವಿಧಾನದ ಗುರಿಯಾದ ಸಮಾನತೆಯನ್ನು ಸಾಧಿಸಲು ಸಾಧ್ಯವೇ? ಅಥವಾ ಈ ರೀತಿ ಮಾಡುವುದರಿಂದ ಸಮಾನತೆಯ ಉದ್ದೇಶಕ್ಕೆ ಅಡ್ಡಿ ಉಂಟಾಗುತ್ತದೆಯೇ?

*ಮೀಸಲಾತಿಯ ಪ್ರಯೋಜನ ಪಡೆದು ವ್ಯಕ್ತಿಯೊಬ್ಬ ಜವಾನ ಅಥವಾ ಕಸಗುಡಿಸುವ ಹುದ್ದೆ ಪಡೆದರೆ, ಆತ ಹಿಂದುಳಿದವನಾಗಿಯೇ ಇರುತ್ತಾನೆ. ಆದರೆ ಮೀಸಲಾತಿಯ ಪ್ರಯೋಜನ ಪಡೆದು ಜೀವನದಲ್ಲಿ ಉನ್ನತ ಸ್ಥಾನ ತಲುಪಿದಾಗ, ಆತನನ್ನು ಹಿಂದುಳಿದವ ಎಂದು ಗುರುತಿಸಲಾಗದು

*ಮೀಸಲಾತಿ ಪ್ರಯೋಜನವು ಹೆಚ್ಚು ಹಿಂದುಳಿದವರಿಗೆ, ಕಡಿಮೆ ಪ್ರಾತಿನಿಧ್ಯ ಪಡೆದಿರುವವರಿಗೆ ಸಿಗುವಂತೆ ಮಾಡಲು ರಾಜ್ಯಗಳು ಯತ್ನಿಸಿದಾಗ, ಪರಿಶಿಷ್ಟ ಜಾತಿ
ಗಳಲ್ಲಿ ಆ ನಡೆ ವಿರೋಧಿಸುವ ವರ್ಗಗಳು ತಮ್ಮನ್ನು ತುಳಿದವರ ರೀತಿಯಲ್ಲೇ ನಡೆದುಕೊಂಡಂತೆ ಆಗುತ್ತದೆ

ಚಿನ್ನಯ್ಯ ಪ್ರಕರಣದಲ್ಲಿ ಹೇಳಿದ್ದು...

ಇ.ವಿ. ಚಿನ್ನಯ್ಯ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳು ಇರುವ ಸಂವಿಧಾನ ಪೀಠವು ತನ್ನ ತೀರ್ಪನ್ನು ಫೆಬ್ರುವರಿ 8ರಂದು ಕಾಯ್ದಿರಿಸಿತ್ತು.

ಶತಮಾನಗಳ ಕಾಲ ಅವಮಾನವನ್ನು, ತಾರತಮ್ಯವನ್ನು ಹಾಗೂ
ಬಹಿಷ್ಕಾರವನ್ನು ಎದುರಿಸಿದ ಪರಿಶಿಷ್ಟ ಜಾತಿ ಸಮುದಾಯಗಳು ಒಂದು ಏಕರೂಪಿ ವರ್ಗ; ಆ ವರ್ಗವನ್ನು ಮತ್ತೆ ವರ್ಗೀಕರಿಸಲು ಆಗುವುದಿಲ್ಲ ಎಂದು ಚಿನ್ನಯ್ಯ ಪ್ರಕರಣದ ತೀರ್ಪಿನಲ್ಲಿ ಕೋರ್ಟ್ ಹೇಳಿತ್ತು.

ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳಲ್ಲಿ ಹೆಚ್ಚು ದುರ್ಬಲವಾಗಿರುವ ಜಾತಿಗಳಿಗೆ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಕಲ್ಪಿಸಲು, ರಾಜ್ಯಗಳು ಒಳವರ್ಗೀಕರಣ ಮಾಡಲು ಆಗುವುದಿಲ್ಲ ಎಂದು ಕೋರ್ಟ್‌ 2004ರಲ್ಲಿ ಹೇಳಿತ್ತು. ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳು ನಿರ್ದಿಷ್ಟ ಜಾತಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲು ಪರಿಶಿಷ್ಟ ಜಾತಿಗಳ ಒಳವರ್ಗೀಕರಣಕ್ಕೆ ಪ್ರತ್ಯೇಕ ಕಾನೂನು ರೂಪಿಸಿದ ನಂತರದಲ್ಲಿ ವಿವಾದ ಸೃಷ್ಟಿಯಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries