ಕಾಸರಗೋಡು: ಕೇರಳದ ಎಡರಂಗ ಸರ್ಕಾರ ಮೀನುಗಾರರ ಸವಲತ್ತುಗಳನ್ನು ತಡೆಹಿಡಿಯುವ ಮೂಲಕ ಮೀನುಗಾರರ ಜೀವನವನ್ನು ಮೂರಾಬಟ್ಟೆ ಮಾಡಿರುವುದಾಗಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ತಿಳಿಸಿದ್ದಾರೆ. ಅವರು ಮೀನುಗಾರರ ವಿವಿಧ ಸವಲತ್ತು ತಡೆಹಿಡಿದಿರುವುದಲ್ಲದೆ, ಕಲ್ಯಾಣ ನಿಧಿ ಮೊತ್ತವನ್ನು ಮೂರು ಪಟ್ಟು ಹೆಚ್ಚಳಗೊಳಿಸಿರುವುದನ್ನು ಪ್ರತಿಭಟಿಸಿ ಕೇರಳ ಪ್ರದೇಶ ಮೀನುಕಾರ್ಮಿಕರ ಸಂಘ (ಬಿಎಂಎಸ್) ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಮೀನುಗಾರಿಕಾ ಕಛೇರಿಯ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.
ಕೇರಳದ ಕರಾವಳಿ ಪ್ರದೇಶದಲ್ಲಿ ದುಡಿಯುತ್ತಿರುವ ಮೀನುಗಾರ ಮಹಿಳೆಯರು ಮತ್ತು ಅನುಬಂಧ ಕಾರ್ಮಿಕರ ಕಲ್ಯಾಣನಿಧಿಗಿರುವ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವುದರ ಜೊತೆಗೆ ಕಾರ್ಮಿಕರಿಗೆ ಸರ್ಕಾರದಿಂದ ನ್ಯಾಯಯುತವಾಗಿ ಲಭಿಸಬೇಕಾದ ಸವಲತ್ತುಗಳನ್ನು ತಡೆಹಿಡಿದಿರುವುದು ಖಂಡನೀಯ. ಬಡ ಮೀನುಕಾರ್ಮಿಕರ ರಕ್ತಹೀರಲು ಮುಂದಾಗಿರುವ ಸರ್ಕಾರದ ಧೋರಣೆ ಮೀನುಗಾರನ್ನು ಸಂಕಷ್ಟದ ಸುಳಿಗೆ ಸಿಲುಕುವಂತೆ ಮಾಡಿದೆ. ಈ ಬಗ್ಗೆ ತಕ್ಷಣ ಗಮನಹರಿಸಿ ಸವಲತ್ತು ಮಂಜೂರುಗೊಳಿಸುವುದರೊಂದಿಗೆ ಹೆಚ್ಚಳಗೊಳಿಸಿರುವ ಕಲ್ಯಾಣ ನಿಧಿ ಮೊತ್ತವನ್ನು ಕಡಿತಗೊಳಿಸುವಂತೆಯೂ ಆಗ್ರಹಿಸಿದರು.
ಕೇರಳ ಪ್ರದೇಶ ಮೀನುಗಾರರ ಒಕ್ಕೂಟ ಕಾಸರಗೋಡು ಜಿಲ್ಲಾಧ್ಯಕ್ಷ ಪಿ.ದಿನೇಶ್ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಪದಾಧಿಕಾರಿಗಳಾದ ಶಿವನ್ ತಾಳಿಪಡ್ಪು, ಹರಿಕೃಷ್ಣನ್, ಅಜಂತಾ ಬಾಬು ಸೋಮ, ಜನಾರ್ದನನ್ ಕಡಪ್ಪುರ, ವಾರ್ಡ್ ಕೌನ್ಸಿಲರ್ ಅಜಿತ್ ಕಡಪ್ಪುರ, ರಂಜಿತ್ ಕಡಪ್ಪುರ, ಅಶ್ವತಿ ಕಡಪ್ಪುರ, ಪ್ರಿಯೇಶ್ ಕುಂಬಳೆ, ಪ್ರಜಿತ್ ಕುಂಬಳೆ, ಶಶಿ ಉಪ್ಪಳ ಉಪಸ್ಥಿತರಿದ್ದರು. ಕೇರಳ ಪ್ರದೇಶ ಮೀನುಗಾರ ಜಿಲ್ಲಾ ಕಾರ್ಯದರ್ಶಿ ರಮೇಶ್ ಕಡಪ್ಪುರ ಸ್ವಾಗತಿಸಿದರು. ಪದ್ಮನಾಭ ಕಡಪ್ಪುರ ವಂದಿಸಿದರು.