ಕಾಸರಗೋಡು: ಪನತ್ತಡಿ ಸನಿಹದ ಪರಿಯಾರಂ ಕಾರ್ಯಂಗಾನ ರಸ್ತೆ ಸನಿಹ ಹುಲಿ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಡಿದ್ದು, ಈ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.
ಸೋಮವಾರ ರಾತ್ರಿ ವಾಹನದಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ನಿವಾಸಿ ನೌಶಾದ್ ಎಂಬವರಿಗೆ ಹುಲಿ ಕಾಣಿಸಿಕೊಂಡಿದ್ದು, ರಸ್ತೆಗೆ ಅಡ್ಡ ಸಂಚರಿಸಿದ ಹುಲಿ, ಸನಿಹದ ರಬ್ಬರ್ ತೋಟದತ್ತ ಸಾಗಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ನೀಡಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳು ರಾತ್ರಿ ವೇಳೆ ಸ್ಥಳಕ್ಕಾಗಮಿಸಿ ಹುಡುಕಾಟ ಆರಂಭಿಸಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಹುಲಿ ಹೆಜ್ಜೆ ಗುರುತಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕಾಣಿಸಿಕೊಂಡಿರುವುದು ಹುಲಿಯಾಗಿದೆ ಎಂದು ನೌಶಾದ್ ತಿಳಿಸಿದ್ದಾರೆ. ವರ್ಷದ ಹಿಂದೆಯೂ ಈ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಸಾಕು ನಾಯಿಗಳನ್ನು ಎತ್ತಿಕೊಂಡು ಹೋಗಿರುವ ನಿದರ್ಶನಗಳಿದ್ದು, ಮನುಷ್ಯರಿಗೆ ಇದುವರೆಗೆ ಯಾವುದೇ ಉಪಟಳ ನೀಡಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸುತ್ತಾರೆ. ಪಾಣತ್ತೂರು ಕರ್ನಾಟಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಅರಣ್ಯ ಸೆಕ್ಷನ್ ಅಧಿಕಾರಿ ಶೇಷಪ್ಪ ಅವರ ನೇತೃತ್ವದ ಅಧಿಕಾರಿಗಳ ತಂಡ ಸ್ಥಳದಲ್ಲಿ ಹುಲಿಗಾಗಿ ಹುಡುಕಾಟದಲ್ಲಿ ತೊಡಗಿಸಿಕೊಂಡಿದೆ.