ತಿರುವನಂತಪುರಂ: ಮಲಯಾಳಂ ನಟ ಮುಖೇಶ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ನಿಲುವಿನ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ನಿರಾಕರಿದ್ದಲ್ಲದೆ ಸುದ್ದಿಗಾರರನ್ನು ಪಕ್ಕಕ್ಕೆ ತಳ್ಳಿ ಮುಂದೆ ಹೋದ ಘಟನೆ ನಡೆದಿದೆ.
ತ್ರಿಶೂರ್‌ನ ರಾಮನಿಲಯಂ ಸರ್ಕಾರಿ ಅತಿಥಿ ಗೃಹದಿಂದ ತೆರಳುತ್ತಿದ್ದ ವೇಳೆ ಪತ್ರಕರ್ತರು ಪ್ರತಿಕ್ರಿಯೆ ಕೇಳಿದಾಗ ಈ ಘಟನೆ ನಡೆದಿದೆ.
ನಟ ಮತ್ತು ಶಾಸಕ ಮುಖೇಶ್ ವಿರುದ್ಧದ ಆರೋಪಗಳಿಗೆ ನೇರ ಉತ್ತರಿಸದ ಸುರೇಶ್ ಗೋಪಿ, ನ್ಯಾಯಾಲಯವು ಏನಾದರೂ ಹೇಳಿದೆಯೇ? ನೀನು ನ್ಯಾಯಾಲಯವೇ? ಎಂದು ಪ್ರಶ್ನಿಸಿ. ಇಲ್ಲಿಯವರೆಗೆ ಎತ್ತಿರುವ ವಿಷಯಗಳು ಕೇವಲ ಆರೋಪಗಳಾಗಿವೆ ಎಂದು ಹೇಳಿದರು.
ಕೋರ್ಟ್ ಮುಖೇಶ್ ಬಗ್ಗೆ ಏನಾದರೂ ಹೇಳಿದೆಯೇ? ನಾನು ಕಚೇರಿಯಿಂದ ಹೊರಬಂದಾಗ, ನನ್ನ ಕಚೇರಿಯ ಚಟುವಟಿಕೆಗಳ ಬಗ್ಗೆ ನೀವು ಕೇಳಬೇಕು. ನಾನು ಮನೆಯಿಂದ ಹೊರಗೆ ಬಂದಾಗ, ನೀವು ಅದರ ಬಗ್ಗೆ ಏನಾದರೂ ಕೇಳಬೇಕು. ನಾನು ಕೇರಳ ಕಲಾವಿದರ ಸಂಘ(ಅಮ್ಮ)ಆಫೀಸ್‌ನಿಂದ ಹೊರಬಂದಾಗ, ಅದರ ಬಗ್ಗೆ ಕೇಳಿ ಎಂದು ಸಲಹೆ ನೀಡಿದರು.
ಈ ಎಲ್ಲಾ ಆರೋಪಗಳು ಮಾಧ್ಯಮದ ಸೃಷ್ಟಿ. ಮಾಧ್ಯಮಗಳು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಇಲ್ಲಸಲ್ಲದ ಆರೋಪ, ಪ್ರತ್ಯಾರೋಪಗಳನ್ನು ಮಾಡಿಸುತ್ತೀರಿ. ಸಮಾಜದ ಮನಸ್ಥಿತಿಯನ್ನು ದಾರಿ ತಪ್ಪಿಸುತ್ತೀರಿ. ಈ ಎಲ್ಲ ವಿಷಯಗಳು ನ್ಯಾಯಾಲಯದ ಮುಂದಿವೆ. ನ್ಯಾಯಾಲಯವು ಬುದ್ಧಿವಂತಿಕೆ ಮತ್ತು ತಾರ್ಕಿಕ ಸಾಮರ್ಥ್ಯವನ್ನು ಹೊಂದಿದೆ. ನ್ಯಾಯಾಲಯ ಎಲ್ಲವನ್ನು ನಿರ್ಧರಿಸುತ್ತದೆ ಎಂದು ಸುರೇಶ್ ಗೋಪಿ ಹೇಳಿದರು.
ಕೊಲ್ಲಂನಲ್ಲಿರುವ ಮುಖೇಶ್ ನಿವಾಸದ ಕಡೆಗೆ ಯುವ ಮೋರ್ಚಾ ಮೆರವಣಿಗೆಯನ್ನು ಆಯೋಜಿಸಿದ ಒಂದು ದಿನದ ನಂತರ ಸುರೇಶ್ ಪ್ರತಿಕ್ರಿಯಿಸಿದ್ದಾರೆ.