ನವದೆಹಲಿ: ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ವೆಬ್‌ಸೈಟ್‌ನಲ್ಲಿ ಸಂಸ್ಥೆಯ ಕುರಿತು ಸಾಕಷ್ಟು ಮಾಹಿತಿ ಏಕೆ ಇಲ್ಲ ಎಂದು ಪ್ರಶ್ನಿಸಿ ರಾಜ್ಯಸಭೆಯ ಟಿಎಂಸಿ ಸದಸ್ಯೆ ಸಾಗರಿಕಾ ಘೋಷ್ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಾವು ಬರೆದಿರುವ ಪತ್ರವನ್ನು ಶನಿವಾರ ಪೋಸ್ಟ್ ಮಾಡಿರುವ ಅವರು, ಪರೀಕ್ಷಾ ಏಜೆನ್ಸಿಯ ಸದಸ್ಯರು ಯಾರು? ಅಧಿಕಾರಿಗಳು ಯಾರು? ಮತ್ತು ವಾರ್ಷಿಕ ವರದಿ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ತಾನು ನಡೆಸುವ ಪರೀಕ್ಷೆಗಳ ಬಗ್ಗೆ ಸಮಾಜದ ನಂಬಿಕೆಯನ್ನು ಗಳಿಸಬೇಕಾದರೆ ಪರೀಕ್ಷಾ ಏಜೆನ್ಸಿಯು, ತನ್ನ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಸಾಗರಿಕಾ ಅವರ ಪೋಸ್ಟ್ ಅನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ.
ಈಚೆಗೆ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್- ಯುಜಿ) ಮತ್ತು ಯುಜಿಸಿ- ನೆಟ್ ಪರೀಕ್ಷೆಗಳಲ್ಲಿ ಅಕ್ರಮ ವರದಿಯಾಗಿದ್ದರಿಂದ ಸಂಸ್ಥೆಯು ಸಾಕಷ್ಟು ಟೀಕೆಗೊಳಗಾಗಿತ್ತು.