ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ ಹೇಮಾ ವರದಿಯಲ್ಲಿ ಕಿರುಕುಳ ನೀಡಿದ ಕೆಲ ಪ್ರಭಾವಿಗಳ ಹೆಸರಿದ್ದು, ಅವರನ್ನು ರಕ್ಷಿಸುವ ಕೆಲಸನ್ನು ಆಡಳಿತಾರೂಢ ಎಡಪಕ್ಷ ಮಾಡುತ್ತಿದೆ. ಇದರ ನೈತಿಕ ಹೊಣೆ ಹೊತ್ತು ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ರಾಜೀನಾಮೆ ನೀಡಲಿ ಎಂದು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಆಗ್ರಹಿಸಿದ್ದಾರೆ.
ನ್ಯಾ. ಹೇಮಾ ಸಮಿತಿ ನೀಡಿದ ವರದಿಯು ಕೇರಳದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಕಿರುಕುಳದ ವರದಿಯನ್ನು ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಸಮಿತಿ ಶಿಫಾರಸು ಮಾಡಿದೆ.
'ನಾಲ್ಕು ವರ್ಷಗಳ ಕಾಲ ವರದಿ ಬಹಿರಂಗಪಡಿಸಲಾಗದು ಸಚಿವ ಚೆರಿಯನ್ ಹೇಳಿದ್ದಾರೆ. ದೂರು ನೀಡಿದರೆ ಮಾತ್ರ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇಂಥ ಹೇಳಿಕೆ ನೀಡುವ ಸಚಿವರು ಆ ಸ್ಥಾನಕ್ಕೆ ಅಸಮರ್ಥರು. ಹೀಗಾಗಿ ಅವರು ರಾಜೀನಾಮೆ ನೀಡಬೇಕು' ಎಂದಿದ್ದಾರೆ.
'ನ್ಯಾ. ಹೇಮಾ ಸಮಿತಿ ವರದಿ ಆಧರಿಸಿ ಐಪಿಎಸ್ ಅಧಿಕಾರಿ ಮೂಲಕ ತನಿಖೆ ನಡೆಸಬೇಕು' ಎಂದು ಸತೀಶನ್ ಒತ್ತಾಯಿಸಿದ್ದಾರೆ.