ಪಾಟ್ನಾ: ಬಡತನ ನಿರ್ಮೂಲನೆಗೆ ಜಾತಿ ಗಣತಿ ಅನಿವಾರ್ಯ ಎಂದು ಹೇಳಿರುವ ರಾಹುಲ್ ಗಾಂಧಿ ಮೊದಲು ಅವರದ್ದೇ ಪಕ್ಷ ಅಧಿಕಾರದಲ್ಲಿರುವ ತೆಲಂಗಾಣ, ಕರ್ನಾಟಕದಲ್ಲಿ ಜಾತಿ ಗಣತಿ ಮಾಡಿ... ಅವರ ಮಾದರಿ ತೋರಿಸಲಿ ಎಂದು ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಸವಾಲೆಸೆದಿದ್ದಾರೆ.
ಬಿಹಾರದಲ್ಲಿ ರಾಹುಲ್ ಗಾಂಧಿ ಜಾತಿ ಗಣತಿ ವಿಚಾರವಾಗಿ ಮಾತನಾಡಿದ ಪ್ರಶಾಂತ್ ಕಿಶೋರ್, 'ಜಾತಿ ಗಣತಿಯು ಒಂದು ವಿಭಾಗದ ಸಂಖ್ಯೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಅದು ಬಡತನವನ್ನು ನಿರ್ಮೂಲನೆ ಮಾಡುವುದಿಲ್ಲ. ಜಾತಿ ಗಣತಿ ಅಷ್ಟೊಂದು ಉಪಯುಕ್ತವಾಗಿದ್ದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಲ್ಲೆಲ್ಲಾ ನಡೆಸಿ ಬಡತನವನ್ನು ಹೋಗಲಾಡಿಸಬೇಕು ಎಂದು ಸವಾಲೆಸೆದಿದ್ದಾರೆ.
ರಾಹುಲ್ ಗಾಂಧಿ ಅವರ ಪಕ್ಷ ದೇಶದಲ್ಲಿ 60 ವರ್ಷ ಆಡಳಿತ ನಡೆಸಿದೆ. 60 ವರ್ಷಗಳಿಂದ ಅವರ ಬುದ್ಧಿವಂತಿಕೆ ಎಲ್ಲಿತ್ತು? ಕಳೆದ 60 ವರ್ಷಗಳಿಂದ ನಿಮ್ಮ ಪಕ್ಷ ಅಧಿಕಾರದಲ್ಲಿತ್ತು, ನೀವು ಜಾತಿ ಗಣತಿ ಮಾಡಿ ಬಡತನ ನಿರ್ಮೂಲನೆ ಮಾಡಬೇಕಾಗಿತ್ತು. ಈಗ ನಿಮಗೆ ಈ ಬುದ್ಧಿ ಬಂದಿದೆ ಎಂದು ನಾವು ಭಾವಿಸೋಣ.. ಆದರೆ ಕನಿಷ್ಠ ಪಕ್ಷ ನಿಮ್ಮ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಿ ಬಡತನವನ್ನು ತೊಲಗಿಸಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
"ಜಾತಿ ಗಣತಿ ಬಡತನ ನಿರ್ಮೂಲನೆ ಮಾಡುತ್ತದೆ ಎಂಬ ಅವರ ವಾದವನ್ನು ಒಪ್ಪುವುದೇ ಆದರೆ ಬಿಹಾರದಲ್ಲಿ ಜಾತಿ ಗಣತಿ ಮಾಡಿದ್ದು, ಇಲ್ಲಿ ಯಾರ ಬಡತನ ನಿವಾರಣೆಯಾಗಿದೆ?. ಕಾಂಗ್ರೆಸ್ ಸರ್ಕಾರ ಇರುವಲ್ಲೆಲ್ಲಾ ಅವರು ಜಾತಿ ಗಣತಿ ನಡೆಸಿ ಅಲ್ಲಿ ಬಡತನ ನಿರ್ಮೂಲನೆ ಮಾಡಬೇಕು... ಆಗ ನಾವು ಅವರ ಪಕ್ಷದ ಧ್ವಜವನ್ನು ಹಿಡಿದು ಆ ಮಾದರಿಯನ್ನು ಅನುಸರಿಸುತ್ತೇವೆ ಎಂದಿದ್ದಾರೆ.
"ಜಾತಿ ಜನಗಣತಿ ಅಥವಾ ಇತರ ಯಾವುದೇ ಸಮೀಕ್ಷೆಯು ಸಮಾಜದ ವಿವಿಧ ವರ್ಗಗಳ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಹೊರತು, ಆ ಮಾಹಿತಿಯು ಸಹಾಯ ಮಾಡುವುದಿಲ್ಲ. ಜನರು ಬಡವರು ಎಂದು ತಿಳಿದಿದೆ, ಆದರೆ ಅವರನ್ನು ಬಡತನದಿಂದ ಮೇಲೆತ್ತುವ ಮಾರ್ಗವನ್ನು ತೋರಿಸಬೇಕಾಗಿದೆ. ಬಿಹಾರವು ದೇಶದ ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯವಾಗಿದೆ. ಇದಕ್ಕೆ ಜನಗಣತಿ ಅಗತ್ಯವಿದೆಯೇ? ಇಲ್ಲವೇ ಎಂಬುದು ಎಲ್ಲರಿಗೂ ಈಗಾಗಲೇ ತಿಳಿದಿದೆ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಪ್ರಶಾಂತ್ ಕಿಶೋರ್ ವ್ಯಂಗ್ಯ ಮಾಡಿದ್ದಾರೆ.