ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು (ಸೋಮವಾರ) ವಜಾಗೊಳಿಸಿದೆ.
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು (ಸೋಮವಾರ) ವಜಾಗೊಳಿಸಿದೆ.
ಯಾವುದೇ ಸಮರ್ಥನೀಯ ಕಾರಣವಿಲ್ಲದಿರುವುದರಿಂದ ಕೇಜ್ರಿವಾಲ್ ಅವರ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತಿಳಿಸಿದ್ದಾರೆ.
ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ಜತೆಗೆ, ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯಕ್ಕೆ ಹೋಗುವಂತೆಯೂ ತಿಳಿಸಿದೆ.
ಸಿಬಿಐ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 17 ರಂದು ಹೈಕೋರ್ಟ್ ಕಾಯ್ದಿರಿಸಿತ್ತು.
'ಕೇಜ್ರಿವಾಲ್ ಅವರು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎನ್ನಲು ಪುರಾವೆಗಳಿವೆ' ಎಂದು ಸಿಬಿಐ ಪರ ವಕೀಲ ಡಿ.ಪಿ.ಸಿಂಗ್ ವಾದಿಸಿದ್ದರು.
'ಅವರ ಬಂಧನವಿಲ್ಲದೆ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ನಾವು ತಿಂಗಳೊಳಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದೇವೆ. ಅವರ ಬಂಧನದ ಬಳಿಕ ಸಾಕ್ಷ್ಯಗಳು ನಮಗೆ ದೊರೆತಿವೆ. ಅವರದ್ದೇ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ' ಎಂದು ಹೇಳಿದ ಅವರು, 'ವಿಚಾರಣಾ ನ್ಯಾಯಾಲಯದಲ್ಲಿ ಅಂತಿಮ ಆರೋಪ ಪಟ್ಟಿ ಸಲ್ಲಿಸಲಾಗಿದೆ' ಎಂದು ತಿಳಿಸಿದ್ದರು.
ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನದ ಅವಧಿಯನ್ನು ಜುಲೈ 31ರವರೆಗೆ ಮತ್ತು ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶಿಸಿತ್ತು.
ಇದಕ್ಕೂ ಮೊದಲು, ಇ.ಡಿ. ವಿಚಾರಣೆ ನಡೆಸುತ್ತಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಸಿಬಿಐ ನಡೆಸುತ್ತಿರುವ ಪ್ರಕರಣದಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.