ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಹಾಗೂ ಕಂಪ್ಯೂಟರ್ ತರಬೇತುದಾರ ವಿನೋದ್ ಕುಮಾರ್ ಚೌಧರಿ ಅವರು 20 ಗಿನ್ನೆಸ್ ದಾಖಲೆ ಹೊಂದುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಿದ್ದಾರೆ.
ದೆಹಲಿಯ ಕಿರಾರಿ ಸುಲೇಮಾನ್ ನಗರದ ನಿವಾಸಿಯಾದ 43 ವರ್ಷದ ವಿನೋದ್, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವೇಗವಾಗಿ ಟೈಪಿಸುವ, ಮೌತ್‌ಸ್ಟಿಕ್ ಬಳಸಿ ಹಾಗೂ ಮೂಗಿನಿಂದ ಅಕ್ಷರವನ್ನು ಟೈಪ್ ಮಾಡುವ ಸಾಹಸ ಸೇರಿದಂತೆ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಸ್ವತಃ ತೆಂಡೂಲ್ಕರ್ ಅಭಿಮಾನಿಯಾಗಿರುವ ಚೌಧರಿ ಅವರು ತಮ್ಮ 20ನೇ ಗಿನ್ನೆಸ್ ದಾಖಲೆಯನ್ನು ಅವರಿಂದಲೇ ಪಡೆದು ಸಂಭ್ರಮಿಸಿದ್ದಾರೆ.
'ಸಚಿನ್ ಅವರ ಆಟವನ್ನು ನೋಡಿಕೊಂಡೇ ನಾನು ಬೆಳೆದೆ. ಅವರಂತೆಯೇ ದೇಶ ಹೆಮ್ಮೆ ಪಡುವ ಕೆಲಸವನ್ನು ಮಾಡಬೇಕೆಂಬುದು ನನ್ನ ಹಂಬಲವಾಗಿತ್ತು. 20ನೇ ಗಿನ್ನೆಸ್ ದಾಖಲೆಯನ್ನು ನನ್ನ ಆರಾಧ್ಯ ಸಚಿನ್ ಅವರಿಂದಲೇ ಪಡೆಯಬೇಕೆಂಬುದು ನನ್ನ ಬಯಕೆಯಾಗಿತ್ತು. ಬಾಲ್ಯದಿಂದಲೂ ನನಗೆ ಸ್ಫೂರ್ತಿಯಾಗಿದ್ದ ಸಚಿನ್ ಅವರ ದಾಖಲೆಯನ್ನು ಮೀರುವುದೇ ನನ್ನ ಗುರಿಯಾಗಿತ್ತು' ಎಂದು ಚೌಧರಿ ಹೇಳಿದ್ದಾರೆ.
'ಸಚಿನ್ ಅವರ ಹೆಸರಿನಲ್ಲಿರುವ ದಾಖಲೆಯನ್ನು ಭಾರತೀಯನೊಬ್ಬ ಮುರಿದಿದ್ದು ಅವರಿಗೂ ಹೆಮ್ಮೆ ಎನಿಸಿದೆ ಎಂಬ ವಿಶ್ವಾಸ ನನ್ನದು' ಎಂದಿದ್ದಾರೆ.
2023ರ ಮಾರ್ಚ್‌ನಲ್ಲಿ ಚೌಧರಿ ಅವರು ಕ್ರಿಕೆಟ್ ಗ್ಲೌಸ್ ತೊಟ್ಟು ಅಕ್ಷರವನ್ನು ಹಿಮ್ಮುಖವಾಗಿ ಮತ್ತು ವೇಗವಾಗಿ ಟೈಪಿಸಿದ್ದರು. ಇದಕ್ಕೆ ಅವರು 11.34 ಸೆಕೆಂಡುಗಳನ್ನು ತೆಗೆದುಕೊಂಡಿದ್ದರು.
ಕ್ರಿಕೆಟ್‌ನಲ್ಲಿ ಸಚಿನ್ ಬಳಿ ಇದೆ ಅತಿ ಹೆಚ್ಚು ಗಿನ್ನೆಸ್ ದಾಖಲೆ
ಕ್ರಿಕೆಟ್ ಕ್ಷೇತ್ರದಲ್ಲಿ ಸಚಿನ್ ಬಳಿ ಅತಿ ಹೆಚ್ಚು 19 ಗಿನ್ನೆಸ್ ದಾಖಲೆಗಳಿವೆ. ಈ ಸಂಗತಿಯು ಗಿನ್ನೆಸ್ ದಾಖಲೆಯ ಅಧಿಕೃತ ಅಂತರ್ಜಾಲ ತಾಣದಲ್ಲಿದೆ ಎಂದು ಪಿಟಿಐ ವರದಿ ಮಾಡಿದೆ.
ಅತಿ ಹೆಚ್ಚು ಟೆಸ್ಟ್ ಪಂದ್ಯ ಆಡಿದ, ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕ ಸಿಡಿಸಿದ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗಳು ಸೇರಿವೆ. 51 ವರ್ಷದ ಸಚಿನ್ 2013ರಲ್ಲಿ 100 ಅಂತರರಾಷ್ಟ್ರೀಯ ಶತಕದ ಮೂಲಕ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಒಲಂಪಿಯನ್ ಆಗಬೇಕೆಂದಿದ್ದ ಚೌಧರಿ ಟೈಪಿಂಗ್ ಮ್ಯಾನ್ ಆಫ್ ಇಂಡಿಯಾ ಅದರು
ಒಲಂಪಿಯನ್ ಆಗಬೇಕೆಂದಿದ್ದ ವಿನೋದ್ ಕುಮಾರ್ ಚೌಧರಿ, ಈಗ 'ಟೈಪಿಂಗ್ ಮ್ಯಾನ್ ಆಫ್ ಇಂಡಿಯಾ' ಎಂದೇ ಗುರುತಿಸಿಕೊಂಡಿದ್ದಾರೆ. ಬಡತನದಲ್ಲೇ ಬೆಳೆದ ಇವರು ಬಾಲ್ಯದಿಂದಲೇ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತಿದ್ದರು.
'ಕ್ರೀಡೆ ಕುರಿತ ಪ್ರೀತಿ ನನ್ನ ರಕ್ತದಲ್ಲೇ ಇದೆ. ಆದರೆ ಅನಿವಾರ್ಯ ಕಾರಣಗಳಿಂದ ನಾನು ಕ್ರೀಡಾಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಿಲ್ಲ. ಆದರೆ ಈ ಸಾಧನೆಗಳ ಮೂಲಕ ನಾನು ಕ್ರೀಡೆಯಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು ಇಲ್ಲಿ ಸಾಧಿಸಿದ ಆತ್ಮತೃಪ್ತಿ ಇದೆ. ನನ್ನ ಕಾಲುಗಳಿಗೆ ಸಾಧನೆಗೆ ಅವಕಾಶ ಸಿಗಲಿಲ್ಲ. ಆದರೆ ನನ್ನ ಬೆರಳುಗಳು ಈಗ ದಾಖಲೆಗಳ ನಿರ್ಮಿಸುವ ಮೂಲಕ ಸಾಧಿಸಿ ತೋರಿಸಿವೆ' ಎಂದು ಚೌಧರಿ ಹೇಳಿದ್ದಾರೆ.
'ಶಾಲಾ ದಿನಗಳಿಂದಲೂ ನನಗೆ ಅಥ್ಲೆಟಿಕ್ಸ್ ಅಂದರೆ ಪ್ರಾಣ. 100 ಮೀ. ಹಾಗೂ 200 ಮೀ. ಓಟದಲ್ಲಿ ಪಾಲ್ಗೊಂಡಿದ್ದೆ. ಮಿಲ್ಕಾ ಸಿಂಗ್ ಅವರೇ ನನಗೆ ಸ್ಫೂರ್ತಿ. ಅವರಂತೆಯೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಮಹದಾಸೆ ಹೊಂದಿದ್ದೆ. ಆದರೆ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾನು ನೌಕರಿ ಹುಡುಕಬೇಕಾಯಿತು' ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
'ಕೊರಿಯರ್ ಬಾಯ್ ಆಗಿ ಕೆಲಸ ಮಾಡುವಾಗ ಒಂದು ಕಚೇರಿಗೆ ಹೋಗಿದ್ದೆ. ಅಲ್ಲಿ ಒಬ್ಬರು ಟೈಪ್ ಮಾಡುತ್ತಾ ಇದ್ದರು. ಈ ಕೆಲಸ ಸಿಕ್ಕರೆ ದುಡಿಮೆಗೆ ಒಂದು ದಾರಿಯಾಗುತ್ತದೆ ಎಂದೆನಿಸಿತು. ಈ ಕೌಶಲ ಕಲಿಸಪ್ಪ ಎಂದು ದೇವರಲ್ಲಿ ಪ್ರಾರ್ಥಿಸಿದೆ. ಅದಕ್ಕಾಗಿಯೇ ಒಂದು ಹಳೆಯ ಟೈಪ್‌ರೈಟರ್ ಖರೀದಿಸಿದೆ. ಅಲ್ಲಿಂದ ನಿರಂತರವಾಗಿ ಅಭ್ಯಾಸ ಮಾಡತೊಡಗಿದೆ. ನೌಕರಿ ಮುಗಿಸಿ, ರಾತ್ರಿ ಟೈಪ್ ಮಾಡುವುದೇ ಕೆಲಸ. ಅದರ ಫಲವೇ 20 ಗಿನ್ನೆಸ್ ದಾಖಲೆ. ಇವುಗಳಲ್ಲಿ 9 ಅದ್ವಿತೀಯ ದಾಖಲೆಗಳಾಗಿವೆ. ಇವುಗಳು ಮೊದಲ ಬಾರಿಗೆ ದಾಖಲೆ ಪುಸ್ತಕ ಸೇರಿವೆ' ಎಂದರು ವಿನೋದ್ ಕುಮಾರ್.