ಲಖನೌ: ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಆಗಸ್ಟ್ 27 ರಂದು ವಿವಾದಾತ್ಮಕ ಹೊಸ ಡಿಜಿಟಲ್ ಮೀಡಿಯಾ ನೀತಿ 2024ಕ್ಕೆ ಅನುಮೋದನೆ ನೀಡಿದೆ.
ಇದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ “ದೇಶ ವಿರೋಧಿ ಕಂಟೆಂಟ್ ಅಪ್‌ಲೋಡ್ ಮಾಡುವ ಇನ್ ಫ್ಲ್ಯುಯನ್ಸರ್' ಅಥವಾ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳವನ್ನು ಉಂಟು ಮಾಡಿದೆ.
ದೇಶ ವಿರೋಧಿ, ಸರ್ಕಾರ ವಿರೋಧಿ, ಅಶ್ಲೀಲ ಅಥವಾ ಆಕ್ಷೇಪಾರ್ಹ ವಿಷಯವನ್ನು ರೂಪಿಸುವುದಕ್ಕಾಗಿ ಜೀವಾವಧಿ ಶಿಕ್ಷೆಯ ನಿಬಂಧನೆಯನ್ನುಸಹ ಒಳಗೊಂಡಿದೆ. ಯಾವುದೇ ಸಂದರ್ಭದಲ್ಲೂ ವಿಷಯವು ಅಸಭ್ಯ, ಅಶ್ಲೀಲ ಅಥವಾ ದೇಶ ವಿರೋಧಿಯಾಗಿರಬಾರದು ಎಂದು ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಅಶ್ಲೀಲ ಅಥವಾ ಮಾನಹಾನಿಕರ ಅಂಶ ಪ್ರಸಾರ ಮಾಡುವುದು ಕ್ರಿಮಿನಲ್ ಮಾನನಷ್ಟ ಆರೋಪಗಳಿಗೆ ಕಾರಣವಾಗಬಹುದು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಂಡರೆ ಗಂಭೀರ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮತ್ತೊಂದೆಡೆ ಜಾಹೀರಾತು ನೀತಿ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಮತ್ತು ಆದಾಯವನ್ನು ಸುರಕ್ಷಿತಗೊಳಿಸಲು ಡಿಜಿಟಲ್ ಮಾಧ್ಯಮ ವೇದಿಕೆಗಳನ್ನು ಉತ್ತೇಜಿಸುತ್ತದೆ. ಹೊಸ ನೀತಿಯಡಿ ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮತ್ತು ಇನ್ ಫ್ಲ್ಯುಯನ್ಸರ್' ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಸಾಧನೆಗಳನ್ನು ಎತ್ತಿ ತೋರಿಸುವ ವೀಡಿಯೊ ಕಂಟೆಂಟ್‌ಗಾಗಿ ತಿಂಗಳಿಗೆ ರೂ. 8 ಲಕ್ಷದವರೆಗೆ ಗಳಿಸಬಹುದು. ಇನ್ ಫ್ಲ್ಯುಯನ್ಸರ್', ವಿವಿಧ ಸೋಶಿಯಲ್ ಮೀಡಿಯಾದ ಖಾತೆದಾರರು, ಆಪರೇಟರ್ ಗಳ ನಿರ್ದಿಷ್ಟ ಆದಾಯದ ಮಿತಿಯನ್ನು ಸಹ ಪ್ರಕಟಿಸಲಾಗಿದೆ.