ಇಸ್ಮಾಮಾಬಾದ್: ವಸತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ (ನಿವೃತ್ತ) ಅವರನ್ನು ಕೋರ್ಟ್ ಮಾರ್ಷಲ್‌ಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪಾಕಿಸ್ತಾನ ಸೇನೆ ಸೋಮವಾರ ಖಚಿತಪಡಿಸಿದೆ.
''ಟಾಪ್ ಸಿಟಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಫಯಾಜ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸುವ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಆದೇಶದಂತೆ ಪಾಕಿಸ್ತಾನ ಸೇನೆ ವಿಸ್ತೃತವಾಗಿ ತನಿಖೆ ನಡೆಸಲಿದೆ' ಎಂದು ಸೇನಾ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಇದಕ್ಕೆ ಪೂರಕವಾಗಿ ಪಾಕಿಸ್ತಾನ ಸೇನಾ ಕಾಯ್ದೆಯಡಿ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.
ಐಎಸ್‌ಐ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಕಳೆದ ಏಪ್ರಿನಲ್‌ನಲ್ಲಿ ತನಿಖಾ ಸಮಿತಿಯನ್ನು ಸೇನೆ ರಚಿಸಿತ್ತು. 2019ರಿಂದ 2021ರ ಅವಧಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ಹಮೀದ್ ಅವರು, ಭಾರಿ ಪ್ರಭಾವಿಯಾಗಿದ್ದರು ಎಂದೆನ್ನಲಾಗಿದೆ.