ದೆಹಲಿ ಪೊಲೀಸ್ ವಿಶೇಷ ಘಟಕವು ಮೋಸ್ಟ್ ವಾಂಟೆಡ್ ಇಸಿಸ್ ಉಗ್ರ ರಿಜ್ವಾನ್ ಅಲಿಯನ್ನು ಬಂಧನಕ್ಕೊಳಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಉಗ್ರರ ಪುಣೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ಫೋಟೋ ಬಿಡುಗಡೆ ಮಾಡಿದ್ದ ಪೊಲೀಸರು, 3 ಲಕ್ಷ ಬಹುಮಾನ ಘೋಷಿಸಿದ್ದರು. ರಿಜ್ವಾನ್ ದೆಹಲಿಯ ದರಿಯಾಗಂಜ್ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಿಜ್ವಾನ್ ಜೊತೆಗೆ ಮತ್ತಷ್ಟು ಉಗ್ರರ ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಇವರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ನಡುವೆ ರಾಷ್ಟ್ರ ರಾಜಧಾನಿ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದು, ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಉಗ್ರರ ಪತ್ತೆಗೆ ಶೋಧ ಕಾರ್ಯಗಳು ತೀವ್ರಗೊಂಡಿವೆ.
ಈಗಾಗಲೇ ಪೊಲೀಸರು ದೆಹಲಿಯಾದ್ಯಂತ ಮೋಸ್ಟ್ ವಾಂಟೆಡ್ ಉಗ್ರರ ಫೋಟೋ ಹಾಗೂ ಮಾಹಿತಿಗಳುಳ್ಳ ಪೋಸ್ಟರ್ ಗಳನ್ನು ಬೀದಿ ಬೀದಿಗಳಲ್ಲಿ ಲಗತ್ತಿಸಿದ್ದು, ಇವರ ಬಗ್ಗೆ ಯಾವುದೇ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಹಾಗೂ ಮಾಹಿತಿದಾರರ ಗೌಪ್ಯತೆ ಕಾಪಾಡುವುದಾಗಿ ಹೇಳಿದ್ದಾರೆ.
ಪೋಸ್ಟರ್ ನಲ್ಲಿ ಒಟ್ಟು 15 ಉಗ್ರರ ಮಾಹಿತಿಗಳನ್ನು ನೀಡಲಾಗಿದ್ದು, ಈ ಪೈಕಿ 6 ಮಂದಿ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವವರಾಗಿದ್ದಾರೆಂದು ತಿಳಿದುಬಂದಿದೆ.