ಶ್ರೀನಗರ: ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕೇಂದ್ರಾಡಳಿತ ಪ್ರದೇಶದ ಎಲ್ಲ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಅಂತಿಮಗೊಂಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಶ್ರೀನಗರ: ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕೇಂದ್ರಾಡಳಿತ ಪ್ರದೇಶದ ಎಲ್ಲ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಅಂತಿಮಗೊಂಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಮೈತ್ರಿ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಬ್ದುಲ್ಲಾ ಅವರ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಸಭೆಯ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹೃದಯಸ್ಪರ್ಶಿ ವಾತಾವರಣದಲ್ಲಿ ನಡೆದ ಸಭೆಯಲ್ಲಿ ಉತ್ತಮ ಚರ್ಚೆ ನಡೆದಿದೆ. ಮೈತ್ರಿಯು ಅಂತಿಮಗೊಂಡಿದೆ. ಇದು ಸುಗಮವಾಗಿ ನಡೆಯಬೇಕೆಂಬುದು ದೇವರ ಆಶಯವಾಗಿದೆ. ಎಲ್ಲ 90 ಕ್ಷೇತ್ರಗಳಲ್ಲೂ ಮೈತ್ರಿ ಮಾಡಿಕೊಳ್ಳಲಾಗಿದೆ' ಎಂದು ಅಬ್ದುಲ್ಲಾ ಹೇಳಿದ್ದಾರೆ.
'ಸಿಪಿಐ(ಎಂ)ನ ಎಂ. ವೈ ತರಿಗಾಮಿ ಕೂಡ ನಮ್ಮೊಂದಿಗಿದ್ದಾರೆ, ನಮ್ಮ ಜನರು ಕೂಡ ನಮ್ಮೊಂದಿಗಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಜನರ ಜೀವನವನ್ನು ಸುಧಾರಿಸಲು ನಾವು ಭಾರಿ ಬಹುಮತದಿಂದ ಗೆಲ್ಲುತ್ತೇವೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆದಷ್ಟು ಶೀಘ್ರದಲ್ಲೇ ಪುನಃ ಸ್ಥಾಪಿಸುವ ದೃಢವಾದ ಬದ್ಧತೆಯನ್ನು ಕಾಂಗ್ರೆಸ್ ಹಾಗೂ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಹೊಂದಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಒಟ್ಟು 90 ಕ್ಷೇತ್ರಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಯ ಅಧಿಸೂಚನೆಯನ್ನು ಚುನಾವಣಾ ಆಯೋಗವು ಪ್ರಕಟಿಸಿದೆ. ಸೆ.18ರಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸೆ. 25ರಂದು 2ನೇ ಹಂತ ಹಾಗೂ ಅ. 1ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.