ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಭಾರಿ ವಾಹನಗಳ ಚಾಲಕರಿಗೆ ಮಾನಸಿಕ ಆರೋಗ್ಯ ತಪಾಸಣೆ ನಡೆಸಲು ಅಲ್ಲಿನ ಆರೋಗ್ಯ ಇಲಾಖೆ ನಿರ್ಧರಿಸಿದೆ.
ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಭಾರಿ ವಾಹನಗಳ ಚಾಲಕರಿಗೆ ಮಾನಸಿಕ ಆರೋಗ್ಯ ತಪಾಸಣೆ ನಡೆಸಲು ಅಲ್ಲಿನ ಆರೋಗ್ಯ ಇಲಾಖೆ ನಿರ್ಧರಿಸಿದೆ.
ದುರಂತ ನಡೆದ ಸ್ಥಳದಲ್ಲಿ ಜು.31ರಿಂದ ಅರ್ಥ್ ಮೂವರ್‌ಗಳು, (ಜೆಸಿಬಿ, ಹಿಟಾಚಿ, ಕ್ರೇನ್), ಇತರ ಭಾರಿ ವಾಹನಗಳ ಚಾಲಕರು ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ.
ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ತೆಗೆಯುವುದು ಈ ಚಾಲಕರಿಗೆ ಸವಾಲಾಗಿರುವುದಲ್ಲದೇ, ಅವರ ಮನಸ್ಥಿತಿಯ ಮೇಲೂ ಪರಿಣಾಮ ಬೀರಿದೆ. ಇದರಿಂದ ಚಾಲಕರಿಗೆ ಮಾನಸಿಕ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ನೆರವು ನೀಡಲು ಆದೇಶಿಸಲಾಗಿದೆ ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ.
ದೇಶದ ಬೇರೆ ಬೇರೆ ಕಡೆಯಿಂದ ಬಂದಿರುವ ಸುಮಾರು 300 ಭಾರಿ ವಾಹನಗಳ ಚಾಲಕರು ಸ್ಥಳದಲ್ಲಿದ್ದಾರೆ. ಅವರಿಗೆ ವೈದ್ಯಕೀಯ ನೆರವು ನೀಡಲು ತಂಡ ರಚಿಸಲಾಗಿದೆ ಎಂದು ತಿಳಿಸಿದೆ.
ಇನ್ನು, ಭೂಕುಸಿತ ಅವಘಡದ ಬಳಿಕ ನಾಪತ್ತೆಯಾಗಿರುವ ನಿವಾಸಿಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿದೆ.
ದುರಂತದಲ್ಲಿ ಈವರೆಗೆ 250ಕ್ಕೂ ಹೆಚ್ಚು ಮೃತರ ಗುರುತು ಪತ್ತೆಯಾಗಿದ್ದು, ಇನ್ನೂ ಹಲವರು ಅವಶೇಷಗಳ ಅಡಿ ಸಿಲುಕಿದ್ದಾರೆ.