ತಿರುವನಂತಪುರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ 'ಜೈಹಿಂದ್ ಟಿವಿ' ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರನ್ನು (ಎಂಡಿ) ಸಿಬಿಐ ವಿಚಾರಣೆಗೆ ಕರೆಸಿ, ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಕೇರಳದ ಈ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಶಿಜು ಅವರನ್ನು ಸಂಪರ್ಕಿಸಿದಾಗ, ತನಿಖಾ ಸಂಸ್ಥೆಯಿಂದ ಸಮನ್ಸ್ ಬಂದಿದ್ದರಿಂದ ಮಂಗಳವಾರ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರು 'ಜೈಹಿಂದ್ ಟಿವಿ' ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ನೀಡುವಂತೆ ಸಿಬಿಐ ಜುಲೈ 19ರಂದು ಚಾನೆಲ್‌ಗೆ ಹೊಸದಾಗಿ ನೋಟಿಸ್ ನೀಡಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐನ ಎಫ್‌ಐಆರ್ ಅನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಕೆಲವು ದಿನಗಳ ನಂತರ ಖುದ್ದು ಹಾಜರಾಗಲು ಈ ನೋಟಿಸ್ ನೀಡಲಾಗಿದೆ.
ಶಿಜು ಅವರನ್ನು ಸಿಬಿಐ ಕಚೇರಿಯಲ್ಲಿ ಒಂದು ತಾಸು ಇರಿಸಿಕೊಳ್ಳಲಾಗಿತ್ತು. ಅಧಿಕಾರಿಗಳು ಕೇಳಿದ ಎಲ್ಲ ದಾಖಲೆಗಳನ್ನು ಅವರು ಒದಗಿಸಿದರು ಎಂದು ಮೂಲಗಳು ಹೇಳಿವೆ.
'ಹೌದು. ಡಿ.ಕೆ. ಶಿವಕುಮಾರ್ ಅವರು ನಮ್ಮ ಚಾನೆಲ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಯಾವುದೇ ಅಕ್ರಮ ನಡೆದಿಲ್ಲ. ಎಲ್ಲವೂ ಕಾನೂನುಬದ್ಧವಾಗಿಯೇ ಇದೆ. ಒಪ್ಪಂದದ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಸಿಬಿಐ ಅಧಿಕಾರಿಗಳು ಕೇಳಿದ್ದ ಎಲ್ಲ ದಾಖಲೆಗಳನ್ನು ಒದಗಿಸಿದ್ದೇನೆ. ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ' ಎಂದು ಕೇರಳದಲ್ಲಿ ಕಾಂಗ್ರೆಸ್ ನಾಯಕರೂ ಆಗಿರುವ ಶಿಜು 'ಪಿಟಿಐ'ಗೆ ತಿಳಿಸಿದರು.
'ಶಿವಕುಮಾರ್ ಅವರ ಕುಟುಂಬದ ಸದಸ್ಯರ ಹೂಡಿಕೆಯ ಬಗ್ಗೆ ಅಧಿಕಾರಿಗಳು ಸ್ಪಷ್ಟೀಕರಣ ಕೇಳಿದರು. ಡಿ.ಕೆ. ಶಿವಕುಮಾರ್ ಅವರ ಪತ್ನಿ ಅಥವಾ ಮಕ್ಕಳು ಚಾನೆಲ್‌ನಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ಇದನ್ನು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಮುಚ್ಚಿಡಲು ಏನೂ ಇಲ್ಲ' ಎಂದು ಅವರು ಹೇಳಿದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023ರ ಸೆಕ್ಷನ್ 94 ಮತ್ತು 179ರ ಅಡಿಯಲ್ಲಿ ಹೊರಡಿಸಲಾದ ಜುಲೈ 19ರ ನೋಟಿಸ್‌ನಲ್ಲಿ, ಡಿ.ಕೆ. ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಜೈಹಿಂದ್ ಟಿವಿ ಚಾನೆಲ್‌ನಲ್ಲಿ ಮಾಡಿರುವ ಹೂಡಿಕೆಗಳು, ಅವರಿಗೆ ಪಾವತಿಸಿರುವ ಲಾಭಾಂಶಗಳು, ಷೇರು ವಹಿವಾಟಿನ ವಿವರಗಳನ್ನು ಒದಗಿಸುವಂತೆ ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಕೇಂದ್ರೀಯ ತನಿಖಾ ಸಂಸ್ಥೆ ಕೇಳಿದೆ.