ಕೋಲ್ಕತ್ತ: ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ 'ಹಣಕಾಸಿನ ಅವ್ಯವಹಾರ'ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ತನಿಖೆ ಆರಂಭಿಸಿದೆ. ಕಾಲೇಜಿನ ಮಾಜಿ ಪ್ರಾಚಾರ್ಯ ಸಂದೀಪ್ ಘೋಷ್ ಅವರನ್ನು ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ.
ಹಣಕಾಸಿನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ, ಸ್ವಾಮಿ ವಿವೇಕಾನಂದ ರಾಜ್ಯ ಪೊಲೀಸ್ ಅಕಾಡೆಮಿಯ ಐಜಿ ಡಾ.ಪ್ರಣವ್ ಕುಮಾರ್ ನೇತೃತ್ವದಲ್ಲಿ ನಾಲ್ವರು ಸದಸ್ಯರನ್ನೊಳಗೊಂಡ ಎಸ್‌ಐಟಿಯನ್ನು ರಚಿಸಿದೆ.
ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಘಟನೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಘೋಷ್ ಅವರನ್ನು ಶುಕ್ರವಾರದಿಂದ ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿದ್ದರು.
'ಹಣಕಾಸಿನ ಅವ್ಯವಹಾರದಲ್ಲಿ ಘೋಷ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಎಸ್‌ಐಟಿ ಅಧಿಕಾರಿಗಳು ವಿಚಾರಣೆಗಾಗಿ ಶೀಘ್ರದಲ್ಲೇ ಅವರಿಗೆ ಸಮನ್ಸ್ ನೀಡಲಿದ್ದಾರೆ' ಎಂದು ಅಧಿಕಾರಿಯೊಬ್ಬರು ಹೇಳಿದರು.
2021ರ ಜನವರಿಯಿಂದ ಈವರೆಗೆ ನಡೆದಿರುವ ಹಣಕಾಸಿನ ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯಲಿದೆ. ಘೋಷ್ ಅವರು 2021 ರಲ್ಲಿ ಈ ಕಾಲೇಜಿನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು. ವೈದ್ಯ ವಿದ್ಯಾರ್ಥಿನಿ ಹತ್ಯೆ ಘಟನೆ (ಆಗಸ್ಟ್ 9) ನಡೆದ ಎರಡು ದಿನಗಳ ಬಳಿಕ ಅವರು ರಾಜೀನಾಮೆ ನೀಡಿದ್ದರು.
ಭದ್ರತೆ ಹೆಚ್ಚಳಕ್ಕೆ ಕೇಂದ್ರ ಅಸ್ತು (ನವದೆಹಲಿ ವರದಿ): ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಲ್ಲ ಆಸ್ಪತ್ರೆಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆಯನ್ನು ಶೇ 25ರಷ್ಟು ಹೆಚ್ಚಿಸಲು ಆರೋಗ್ಯ ಸಚಿವಾಲಯವು ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಚಾಲ್ತಿಯಲ್ಲಿರುವ ಭದ್ರತಾ ವ್ಯವಸ್ಥೆಗೆ ಹೊರತಾಗಿ, ಆಸ್ಪತ್ರೆಗಳು ಹೆಚ್ಚುವರಿಯಾಗಿ ಮಾರ್ಷಲ್‌ಗಳ ನಿಯೋಜನೆಗೆ ಬೇಡಿಕೆಯಿಟ್ಟರೆ ಅದಕ್ಕೂ ಒಪ್ಪಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
'ಜನರಿಗೆ ಸರ್ಕಾರದ ಮೇಲಿನ ವಿಶ್ವಾಸ ಇಲ್ಲ'
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಕೊಲೆ ಘಟನೆಯು 'ಅತ್ಯಂತ ನಾಚಿಕೆಗೇಡಿನ ಕೃತ್ಯ' ಎಂದು ಹೇಳಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ 'ಜನರು ರಾಜ್ಯ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ' ಎಂದಿದ್ದಾರೆ. 'ಬಂಗಾಳದಲ್ಲಿ ವಿದ್ಯಾರ್ಥಿಗಳು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಯುವಜನರು ಭಯಭೀತರಾಗಿದ್ದು ಮಹಿಳೆಯರು ಹತಾಶರಾಗಿದ್ದಾರೆ. ನಾಗರಿಕರ ರಕ್ಷಣೆ ಮಾಡಬೇಕಾದ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂಬ ಭಾವನೆ ಜನರಲ್ಲಿ ಇದೆ' ಎಂದು ಮಂಗಳವಾರ ಹೇಳಿದ್ದಾರೆ.
ಬಿಜೆಪಿ ಧರಣಿಗೆ ಅವಕಾಶ
ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಕೋಲ್ಕತ್ತದ ಶ್ಯಾಮ್‌ಬಜಾರ್ ಮೆಟ್ರೊ ನಿಲ್ದಾಣದ ಬಳಿ ಆಗಸ್ಟ್ 21ರಿಂದ ಐದು ದಿನ ಧರಣಿ ನಡೆಸಲು ಪಶ್ಚಿಮ ಬಂಗಾಳ ಬಿಜೆಪಿಗೆ ಕಲ್ಕತ್ತ ಹೈಕೋರ್ಟ್ ಅನುಮತಿ ನೀಡಿದೆ. ಒಂದಕ್ಕಿಂತ ಹೆಚ್ಚು ದಿನ ಪ್ರತಿಭಟನೆಗೆ ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದರು. ಬುಧವಾರದಿಂದ ಆರು ದಿನಗಳ ಧರಣಿಗೆ ಅವಕಾಶ ನೀಡಬೇಕೆಂದು ಬಿಜೆಪಿ ಪರ ವಕೀಲರು ಮನವಿ ಮಾಡಿದ್ದರು. ಎರಡೂ ಕಡೆಯವರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ರಾಜರ್ಷಿ ಭಾರದ್ವಾಜ್ ನಿಗದಿತ ಸ್ಥಳದಲ್ಲಿ ಐದು ದಿನ ಧರಣಿ ನಡೆಸಲು ಅನುಮತಿ ನೀಡಿದರು.