ನವದೆಹಲಿ: ತರಬೇತಿನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮೇಲೆ ಕೋಲ್ಕತ್ತದ ಆರ್.ಜಿ. ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿಯೇ ಲೈಂಗಿಕ ದೌರ್ಜನ್ಯ ವೆಸಗಿ, ಕೊಲೆ ಮಾಡಿರುವ ಕೃತ್ಯ ನಡೆದಿದ್ದು, ಪಶ್ಚಿಮ ಬಂಗಾಳದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವುದನ್ನು ಖಾತ್ರಿಪಡಿಸುವ ಬದಲು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ನಿಷ್ಠರಾಗಿರುವ ಸದಸ್ಯರನ್ನು ಒಳಗೊಂಡ ತನಿಖಾ ಸಮಿತಿಯೊಂದನ್ನು ರಚಿಸಿದೆ. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ ತೀವ್ರ ಅಸಮಾಧಾನಗೊಂಡಿದ್ದಾರೆ' ಎಂದು ಪೂನಾವಾಲಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವು ಮಹಿಳಾ ವಿರೋಧಿ ಸರ್ಕಾರವಾಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಗಾಗಿ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಎಂದು ಪೂನಾವಾಲಾ ಆಗ್ರಹಿಸಿದ್ದಾರೆ.
'ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ. ತೆಲಂಗಾಣದಲ್ಲಿ ನಡೆದಂತಹ ನಿರ್ಭಯಾ ಪ್ರಕರಣವು ಬಂಗಾಳದಲ್ಲಿ ನಡೆಯಬಾರದು' ಎಂದು ಬಿಜೆಪಿ ಮುಖಂಡ ಎನ್.ವಿ.ಸುಭಾಷ್ ತಿಳಿಸಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 'ಈತ ಹೊರಗಿನವನು. ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಮುಕ್ತವಾಗಿ ತೆರಳುತ್ತಿದ್ದ. ಈತನ ಚಲನವಲನ ಶಂಕಾಸ್ಪದವಾಗಿದೆ. ಕೃತ್ಯದಲ್ಲಿ ಈತನ ನೇರ ಪಾತ್ರ ಇರುವಂತಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎದೆರೋಗ ವಿಭಾಗದ 2ನೇ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯ ಶವವು ಅರೆನಗ್ನಾವಸ್ಥೆಯಲ್ಲಿ ಆಸ್ಪತ್ರೆ ಸೆಮಿನಾರ್ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು. ದೇಹದಲ್ಲಿ ಗಾಯದ ಗುರುತುಗಳಿದ್ದವು. ಈ ವಿದ್ಯಾರ್ಥಿನಿಯು ಗುರುವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದರು.
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, 'ವಿದ್ಯಾರ್ಥಿನಿಯ ಕೊಲೆಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಆ ದಿನ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ತರಬೇತಿನಿರತ ವೈದ್ಯರನ್ನು ಪೊಲೀಸರು ಪ್ರಶ್ನೆಗೊಳಪಡಿಸಿದ್ದಾರೆ.