ನವದೆಹಲಿ: ಕೇವಲ 100 ಗ್ರಾಂ ತೂಕದ ಕಾರಣಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ, ಭರವಸೆ ಕಳೆದುಕೊಳ್ಳಬೇಡಿ, ಮತ್ತಷ್ಟು ಬಲಿಷ್ಠರಾಗಿ, ಗಟ್ಟಿ ಮನಸ್ಸಿನಿಂದ ದೇಶಕ್ಕೆ ಬನ್ನಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.
ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೆ ಸ್ಫೂರ್ತಿ. ಇಂದಿನ ಹಿನ್ನಡೆ ನೋವುಂಟುಮಾಡುತ್ತದೆ. ನಾನು ಅನುಭವಿಸುತ್ತಿರುವ ಹತಾಶೆಯ ಭಾವ ಪದಗಳಲ್ಲಿ ಹೇಳುವುದು ಕಷ್ಟವಾಗುತ್ತಿದೆ. ನಿಮ್ಮಲ್ಲಿ ಸ್ಥಿತಿಸ್ಥಾಪಕತ್ವ ಶಕ್ತಿ ಪರಿಸ್ಥಿತಿಯನ್ನು ಎದುರಿಸುವ ಧೈರ್ಯವಿದೆ. ಇನ್ನಷ್ಟು ಬಲಿಷ್ಠರಾಗಿ ಬನ್ನಿ. ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ ಎಂದು ಭರವಸೆ ತುಂಬುವ ಶಬ್ದಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಸೆಮಿಫೈನಲ್ ವರೆಗೆ ಜಯಶಾಲಿಯಾಗಿ ಬಂದ ವಿನೇಶ್ ಫೋಗಟ್ ಇಂದು ಬೆಳಗ್ಗೆಯವರೆಗೂ ಭಾರತೀಯರ ಪಾಲಿಗೆ ಚಿನ್ನದ ಪದಕ ತರುವ ಆಶಾಕಿರಣವಾಗಿದ್ದರು. ಇಂದು ಅಂತಿಮ ಸುತ್ತಿನಲ್ಲಿ ಅಧಿಕ ತೂಕ ಕಾರಣ ನೀಡಿ ಒಲಿಂಪಿಕ್ಸ್ ಸಂಸ್ಥೆ ಅವರನ್ನು ಇಡೀ ಪಂದ್ಯದಿಂದ ಅನರ್ಹ ಮಾಡಿದೆ.
ಈ ಸಂದರ್ಭದಲ್ಲಿ ಭಾರತ ಮತ್ತು ವಿನೇಶ್ ಫೋಗಟ್‌ಗೆ ಮುಕ್ತವಾದ ಆಯ್ಕೆಗಳ ಕುರಿತು ಹಿರಿಯ ಅಥ್ಲೀಟ್ ಮತ್ತು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರೊಂದಿಗೆ ಪ್ರಧಾನ ಮಂತ್ರಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಆಯ್ಕೆಗಳನ್ನು ಅನ್ವೇಷಿಸಲು IOA ಮುಖ್ಯಸ್ಥರಿಗೆ ಪ್ರಧಾನಮಂತ್ರಿ ಕೇಳಿದ್ದಾರೆ ಮತ್ತು ವಿನೇಶ್ ಫೋಗಟ್ ಅವರ ಅನರ್ಹತೆಗೆ ಭಾರತದ ಪ್ರಬಲ ವಿರೋಧವನ್ನು ವ್ಯಕ್ತಪಡಿಸುವಂತೆ ಒತ್ತಾಯಿಸಿದ್ದಾರೆ.