ವಯನಾಡು: ಕೇರಳದ ವಯನಾಡು ಜಿಲ್ಲೆಯ ಭೂಕುಸಿತದ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಂತೆ ಒಂದೊಂದೇ ಕರುಣಾಜನಕ ಕಥೆಗಳು ಹೊರಬರುತ್ತಿವೆ.
ಭೂಕುಸಿತ ಸಂಭವಿಸಿದ ಹಳ್ಳಿಗಳಲ್ಲೊಂದಾದ ಚೂರಲ್ಮಲದಲ್ಲಿ ಒಂದೇ ಕುಟುಂಬದ 16 ಮಂದಿ ಭೂಕುಸಿತದಲ್ಲಿ ಜೀವಂತ ಸಮಾಧಿಯಾಗಿದ್ದು, 4 ಮೃತದೇಹಗಳು ಮಾತ್ರ ಸಿಕ್ಕಿವೆ.
ತಾಯಿ, ಹೆಂಡತಿ, ಇಬ್ಬರು ಮಕ್ಕಳು, ಸಹೋದರಿ ಮತ್ತು ನಾದಿನಿ ಕುಟುಂಬದ 11 ಮಂದಿ ಸೇರಿ 16 ಮಂದಿ ಮೃತಪಟ್ಟಿದ್ದಾರೆ. ಭಯಾನಕ ಭೂಕುಸಿತವು ಈತನ ಸಂಪೂರ್ಣ ಜಗತ್ತನ್ನು ಕಸಿದಿದ್ದು, ಒಂಟಿಯಾಗಿಸಿದೆ.
'ನನ್ನವರು ಈಗ ಯಾರೂ ಬದುಕಿಲ್ಲ' ಎಂದ ಮನ್ಸೂರ್ ಕಣ್ಣುಗಳು ನಿದ್ದೆ ಇಲ್ಲದೆ ಅತ್ತೂ ಅತ್ತೂ ಕೆಂಪಾಗಿದ್ದವು.
'ನನ್ನ ಕುಟುಂಬ, ನನ್ನ ಮನೆ ಎಲ್ಲವೂ ಹೋಗಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.
ಕೆಲಸದ ನಿಮಿತ್ತ ವಯನಾಡಿನಿಂದ ಹೊರಗಿದ್ದ ಮನ್ಸೂರ್ ಮಾತ್ರ ಆ ಕುಟುಂಬದಲ್ಲಿ ಬದುಕಿದ್ದಾರೆ.
'ನನ್ನ ಮಗಳ ಮೃತದೇಹವನ್ನು ನಾನಿನ್ನೂ ನೋಡಿಲ್ಲ. ನನ್ನ ಪತ್ನಿ, ಮಗ, ಸಹೋದರಿ ಮತ್ತು ತಾಯಿಯ ಮೃತದೇಹಗಳು ಸಿಕ್ಕಿವೆ. ಭೂಕುಸಿತ ಆದಾಗ ನಾನು ಅಲ್ಲಿರಲಿಲ್ಲ. ಕೆಲಸಕ್ಕಾಗಿ ಹೊರಗಡೆ ಹೋಗಿದ್ದೆ. ನನ್ನ ಬಳಿ ಏನೂ ಉಳಿದಿಲ್ಲ. ಈಗ ನನ್ನ ಸಹೋದರನ ಮನೆಯಲ್ಲಿದ್ದೇನೆ' ಎಂದು ಮನ್ಸೂರ್ ಭಾರದ ಹೃದಯದಿಂದ ಹೇಳಿದ್ದಾರೆ.
ಭೂಕುಸಿತದ ಬಗ್ಗೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ಕೊಡಲಿಲ್ಲ. ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದರಿಂದ ನಮ್ಮ ಮನೆಗೆ ಬರುವಂತೆ ಅವರಿಗೆ ಹೇಳಿದ್ದೆ. ಆದರೆ, ಅವರು ನಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದರು ಎಂಬುದಾಗಿ ಮನ್ಸೂರ್ ಅವರ ಅಣ್ಣ ನಾಸಿರ್ ಹೇಳಿದ್ದಾರೆ.
ವಿನಾಶಕಾರಿ ಭೂಕುಸಿತ ಸಂಭವಿಸಿರುವ ಮುಂಡಕ್ಕೈ, ಪುಂಚಿರುಮಟ್ಟಂ ಮತ್ತು ಚೂರಲ್ಮಲ ಹಳ್ಳಿಗಳಲ್ಲಿ ಸತತ 6ನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿವೆ. ಪ್ರಮುಖ 7 ಸ್ಥಳಗಳಲ್ಲಿ ರಕ್ಷಣಾ ತಂಡ ಹುಡುಕಾಟ ನಡೆಸುತ್ತಿದೆ. ಮಣ್ಣಿನಡಿ ಸಿಲುಕಿರುವ ಜನರನ್ನು ಪತ್ತೆಮಾಡಲು ರಾಡಾರ್ ಆಧಾರಿತ ಕಾರ್ಯಾಚರಣೆಯನ್ನು ಸೇನೆ ಕೈಗೊಂಡಿದೆ.