HEALTH TIPS

Wayanad Landslide | ದುರಂತಕ್ಕೆ ನಾಡಜನರ ಮಿಡಿತ

          ಲ್ಪೆಟ್ಟ: ಕೇರಳದ ದಕ್ಷಿಣ ತುದಿಯ ಕೊಲ್ಲಂ ಜಿಲ್ಲೆಯಿಂದ ಬಂದಿರುವ ಯುವಕರು ಮತ್ತು ಯುವತಿಯರ ಗುಂಪು ಉತ್ತರದ ಅಂಚಿನಲ್ಲಿರುವ ವಯನಾಡ್‌ ಜಿಲ್ಲೆಯ ಕೇಂದ್ರಸ್ಥಾನ ಕಲ್ಪೆಟ್ಟದ ಬಸ್ ನಿಲ್ದಾಣದ ಬಳಿ ಗುರುವಾರ ಮಧ್ಯಾಹ್ನ ಸೇರಿದ್ದರು.

           ಅವರ ಜೊತೆಗೂಡಿದ ಸ್ಥಳೀಯ ಗೆಳೆಯರು ವಿವಿಧ ಗುಂಪುಗಳಾಗಿ ಭೂಕುಸಿತ ಸಂಭವಿಸಿದ ಚೂರಲ್‌ಮಲ ಮತ್ತು ಮುಂಡಕ್ಕೈ ಭಾಗಗಳಿಗೆ ತೆರಳಿದರು.

          ನಾಡನ್ನೇ ಬೆಚ್ಚಿ ಬೀಳಿಸಿದ ದುರಂತಕ್ಕೆ ಕೇರಳದ ಉದ್ದಗಲದ ಜನರು ಮಿಡಿದಿರುವ ಪರಿಗೆ ಈ ಯುವ ಸಮುದಾಯ ಒಂದು ಉದಾಹರಣೆ ಮಾತ್ರ.

            ಗುಡ್ಡವೇ ಕೆಸರಾಗಿ ಹರಿದು ಬಂದು ಜನರ ಜೀವ ಮತ್ತು ಜೀವನವನ್ನು ಕೊಚ್ಚಿಕೊಂಡು ಹೋದ ಮಹಾದುರಂತದಲ್ಲಿ ಮಡಿದವರ ಸಂಬಂಧಿಕರು ಮತ್ತು ಆಪ್ತರಿಗಾಗಿ ನೂರಾರು ಮಂದಿ ಆಸ್ಪತ್ರೆ, ಶವಾಗಾರ ಮತ್ತಿತರ ಕಡೆಯಲ್ಲಿ ಹುಡುಕಾಡುತ್ತಿದ್ದರೆ ದುರಂತ ನಡೆದ ಜಾಗದಲ್ಲಿ ಶವಗಳ ಶೋಧ ನಡೆಸುತ್ತಿರುವ ಸೇನಾಪಡೆ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ, ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರ ನೆರವಿಗೆ ಇಡೀ ರಾಜ್ಯವೇ ಟೊಂಕಕಟ್ಟಿ ನಿಂತಿದೆ.

ಕಲ್ಪೆಟ್ಟದಿಂದ 9 ಕಿಲೊಮೀಟರ್ ದೂರದ ಮೇಪ್ಪಾಡಿ ಪಟ್ಟಣ ಮತ್ತು ಅಲ್ಲಿಂದ 13 ಕಿಲೊಮೀಟರ್ ದುರ್ಗಮ ರಸ್ತೆ ಸಾಗಿದರೆ ಚೂರಲ್‌ಮಲ ಸಿಗುತ್ತದೆ.

               ಈ ಹಾದಿಯ ತುಂಬ ಈಗ ನೆರವಿನ ಕೈಗಳೇ ಕಾಣಿಸುತ್ತಿವೆ. ಕಲ್ಲು-ಕೆಸರು ಮತ್ತು ಜಲ್ಲಿ ತುಂಬಿರುವ ರಸ್ತೆಯಲ್ಲಿ ಜೀಪು, ಕಾರು, ಲಾರಿ, ದ್ವಿಚಕ್ರ ವಾಹನಗಳಲ್ಲಿ ಜನರನ್ನು ಅತ್ತಿಂದಿತ್ತ, ಇತ್ತಿಂದತ್ತ ಕರೆದುಕೊಂಡು ಹೋಗುವವರು ಒಂದು ಕಡೆ, ಘಟನೆ ನಡೆದ ಸ್ಥಳದಲ್ಲಿ ನೀರು, ಆಹಾರ ಇತ್ಯಾದಿಗಳನ್ನು ವಿತರಿಸಿ ಪ್ರೀತಿಯಿಂದ ಉಪಚರಿಸುತ್ತಿರುವ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಮತ್ತೊಂದೆಡೆ 'ವಯನಾಡ್ ಜೊತೆ ನಾವಿದ್ದೇವೆ' ಎಂಬುದನ್ನು ಸಾರಿ ಹೇಳುತ್ತಿದ್ದಾರೆ.

              ಚೂರಲ್‌ಮಲದಿಂದ 25 ಕಿಲೊಮೀಟರ್ ದೂರದ ಊಟಿ ರಸ್ತೆಗೆ 10 ವರ್ಷಗಳ ಹಿಂದೆ ತೆರಳಿದ ಫ್ಲೋರಾ ಅವರ ಸಹೋದರ ಮತ್ತು ಇತರರು ಚೂರಲ್‌ಮಲದಲ್ಲೇ ಬದುಕು ಕಟ್ಟಿಕೊಂಡಿದ್ದರು. ಆ ಕುಟುಂಬದ ನಾಲ್ಕು ಮಂದಿ ದುರಂತದಲ್ಲಿ ಮಡಿದಿದ್ದಾರೆ. ಅವರ ಅಂತ್ಯಸಂಸ್ಕಾರ ಗುರುವಾರ ಸಂಜೆ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ನಡೆಯಿತು. ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ ಫ್ಲೋರಾ ಮತ್ತು ಮಕ್ಕಳನ್ನು ಕರೆದುಕೊಂಡು ಬಂದ ಯುವಕರ ತಂಡ ತಮ್ಮ ಹೆಸರು ಕೂಡ ಹೇಳದೆ 'ಮಣ್ಣಿನಡಿಯಲ್ಲಿ ಹೂತುಹೋದವರೆಲ್ಲರೂ ನಮ್ಮವರೇ ಅಲ್ಲವೇ, ಅವರಿಗಾಗಿ ಒಂದಿಷ್ಟು ಕೆಲಸ ಮಾಡಿದ ನಮ್ಮ ಹೆಸರಿಗೆ ಮಹತ್ವ ಯಾಕೆ' ಎಂದು ಹೇಳಿ ನೆರವಿಗಾಗಿ ಮೊರೆ ಇಡುತ್ತಿರುವ ಯಾರದೋ ಕೂಗು ಕೇಳುತ್ತಿದ್ದಂತೆ ಅಲ್ಲಿಂದ ಸಾಗಿದರು.

                 ಕೋಯಿಕ್ಕೋಡ್‌ನ 'ತಾಲ್ಲೂಕು ದುರಂತ ರೆಸ್ಪಾನ್ಸ್ ಬಾಯ್ಸ್‌'ನ 728 ಕಾರ್ಯಕರ್ತರ ಪೈಕಿ ಪ್ರತಿ ದಿನ 50 ಮಂದಿ ಬಂದು ಇಲ್ಲಿ ನೆರವು ನೀಡುತ್ತಿದ್ದಾರೆ. 5 ಜನರೇಟರ್, ಸುತ್ತಲೂ ಬೆಳಕಿನ ವ್ಯವಸ್ಥೆ, ಮಾಹಿತಿ ತಿಳಿಸಲು ಧ್ವನಿವರ್ಧಕ ಸೌಲಭ್ಯ, ಕ್ರೇನ್‌ಗಳು, ಚೈನ್‌ಬ್ಲಾಕ್‌ಗಳು, ಕಟಿಂಗ್ ಯಂತ್ರಗಳೊಂದಿಗೆ ಈ ಸಂಸ್ಥೆ ಇಲ್ಲಿಗೆ ಬಂದಿದೆ. ರೈಲು ಅಪಘಾತ, ಬಸ್‌ಗೆ ಬೆಂಕಿ ಬಿದ್ದ ದುರಂತ, ಬಿರುಗಾಳಿಗೆ ಸಿಲುಕಿ ನೂರಾರು ಮಂದಿ ಸಾವಿಗೀಡಾದ ಘಟನೆ ಮುಂತಾದಲ್ಲೆಲ್ಲ ಕೊಳೆತ ಶವಗಳನ್ನು ಮೇಲೆತ್ತಿದ ಮಠತ್ತಿಲ್ ಅಬ್ದುಲ್ ಅಜೀಜ್‌ ಇಲ್ಲೂ ಈ ತಂಡದ ನೇತೃತ್ವ ವಹಿಸಿದ್ದು ಮೂರು ದಿನಗಳಲ್ಲಿ 12 ಶವಗಳನ್ನು ಹೊರತೆಗೆದಿದ್ದಾರೆ.

                'ರಾತ್ರಿ ಉಂಡು ಮಲಗಿದವರು ಕೆಸರಿನ ಪ್ರವಾಹದಲ್ಲಿ ಲೀನವಾಗಿದ್ದಾರೆ. ಇಲ್ಲಿ ಶವಗಳನ್ನು ಹೊರತೆಗೆಯುವಾಗ ದುಃಖ ತಡೆಯಲು ಆಗುತ್ತಿಲ್ಲ. ಕೆಲವರ ಕೈ ಮಾತ್ರ ಸಿಗುತ್ತಿದೆ. ಕೆಲವರ ತಲೆ ಹೋಳಾಗಿ ಹೋಗಿದೆ. ಮನೆ ಮಾಲೀಕರಿಗಾಗಿ ಪಾರಿವಾಳಗಳು ಇಲ್ಲೇ ಸುತ್ತಾಡುತ್ತಿವೆ. ನಾಯಿ ಮತ್ತು ಬೆಕ್ಕುಗಳು ಆಹಾರ ಕೊಟ್ಟರೆ ಸೇವಿಸುತ್ತಿಲ್ಲ. ಈ ಮೂಕ ಜೀವಿಗಳಿಗೆ ಇಲ್ಲಿನ ವಾಸ್ತವವನ್ನು ಅರ್ಥೈಸುವುದಾದರೂ ಹೇಗೆಂದು ತಿಳಿಯುತ್ತಿಲ್ಲ' ಎಂದು 'ಪ್ರಜಾವಾಣಿ' ಜೊತೆ ಮಾತನಾಡಿದ ಅಬ್ದುಲ್ ಅಜೀಜ್‌ ಹೇಳಿದರು.

           ಜಿಲ್ಲೆಯ 9 ಕಡೆಗಳಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿರುವ 578 ಕುಟುಂಬಗಳ 2,328 ಮಂದಿಯನ್ನು ನೋಡಿಕೊಳ್ಳುತ್ತಿರುವ ನೆರವು ತಂಡಗಳು ನೋವುಂಡವರಿಗೆ ಹೃದಯದಾಳದಿಂದ ಸಾಂತ್ವನ ಹೇಳುತ್ತಿದ್ದಾರೆ.

ಅವಿರತ ದುಡಿಮೆಯ ಸೇತುವೆ ಸಿದ್ಧ

             ಚೂರಲ್‌ಮಲದಲ್ಲಿ ಸಣ್ಣ ಹೊಳೆಯಾಗಿ ಹರಿದು ಚಾಲಿಯಾರ್ ನದಿಯನ್ನು ಸೇರುವ ನೀರು ಉಕ್ಕಿಹರಿದಿದ್ದರಿಂದ ಅಟ್ಟಮಲ ಮತ್ತು ಚೂರಲ್‌ಮಲ ನಡುವಿನ ಸಂಪರ್ಕ ಸೇತು ಕಡಿದಿತ್ತು. ಇದನ್ನು ಮರುಸ್ಥಾಪಿಸಲು ಪಣತೊಟ್ಟ ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಸೈನಿಕರು ಬುಧವಾರ ಬೆಳಿಗ್ಗೆಯಿಂದ ಅವಿರತ ದುಡಿದಿದ್ದರು. ಒಂದು ಕ್ಷಣವೂ ನಿಲ್ಲದ ಕೆಲಸದಿಂದಾಗಿ ಗುರುವಾರ ಸಂಜೆ 6 ಗಂಟೆಯ ವೇಳೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಸೇನೆಯ ವಾಹನ ಅದರ ಮೂಲಕ ಸಾಗಿತು. ಸೇತುವೆ ನಿರ್ಮಾಣದಿಂದಾಗಿ ಪರಿಹಾರ ಕಾರ್ಯಗಳಿಗೆ ಶುಕ್ರವಾರ ಚುರುಕು ಸಿಗಲಿದೆ.

            'ಬೈಲಿ ಪ್ಯಾನಲ್ ಮೂಲಕ 119 ಅಡಿ ಉದ್ದದ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇದಕ್ಕೆ ಬೇಕಾದ ಸಾಮಗ್ರಿಗಳನ್ನು ಬೆಂಗಳೂರಿನಿಂದಲೇ ತೆಗೆದುಕೊಂಡು ಬಂದಿದ್ದು 160 ಮಂದಿ ಸೈನಿಕರು ಒಂದು ನಿಮಿಷವೂ ಎಡೆಬಿಡದೆ ಕೆಲಸ ಮಾಡಿದ್ದಾರೆ. 24 ಟನ್ ಭಾರದ ವಾಹನ ಇದರ ಮೇಲಿಂದ ಸಾಗಬಹುದು. 19 ಪ್ಯಾನೆಲ್‌ಗಳನ್ನು ಇದಕ್ಕಾಗಿ ಬಳಸಲಾಗಿದೆ. ಸರ್ಕಾರ ಬಯಸಿದರೆ ಇದನ್ನು ಶಾಶ್ವತವಾಗಿ ಇಲ್ಲಿ ಉಳಿಸಲಾಗುವುದು' ಎಂದು ಶಬರಿಮಲೆಯಲ್ಲಿ ಇದೇ ರೀತಿಯ ಸೇತುವೆ ನಿರ್ಮಿಸಿ ಶಾಶ್ವತವಾಗಿ ಉಳಿಸಿರುವ ಗ್ರೂಪ್‌ನ ಕೇರಳ-ಕರ್ನಾಟಕ ಸಬ್‌ ಏರಿಯಾ ಕಮಾಂಡರ್ ಮೇಜರ್ ಜನರಲ್ ವಿನೋದ್ ಮ್ಯಾಥ್ಯು ವಿವರಿಸಿದರು.

ಪರಿಹಾರ ನಿಧಿಗೆ ನೆರವಿನ ಪ್ರವಾಹ

                   ದುರಂತದಲ್ಲಿ ನಾಶ-ನಷ್ಟ ಅನುಭವಿಸಿದವರ ನೆರವಿಗಾಗಿ ಮತ್ತು ಸಂಪೂರ್ಣ ಇಲ್ಲದಾಗಿರುವ ಊರುಗಳ ಮರುಸ್ಥಾಪನೆಗಾಗಿ ಆರಂಭಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಗುರುವಾರ ಒಂದೇ ದಿನ ₹ 18 ಲಕ್ಷ ಮೊತ್ತ 'ಚೆಕ್‌ಗಳ' ಮೂಲಕ ಬಂದು ತಲುಪಿದೆ ಎಂದು ಕಂಟ್ರೋಲ್‌ ರೂಂ ಮಾಹಿತಿ ನೀಡಿದೆ.

               ದುರಂತದ ಪರಿಶೀಲನೆಗಾಗಿ ಗುರುವಾರ ಇಲ್ಲಿಗೆ ಬಂದ ಮುಖ್ಯಮಂತ್ರಿಗೆ ಆಯುರ್ವೇದ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿಗಳು ₹ 10 ಲಕ್ಷದ ಚೆಕ್ ಹಸ್ತಾಂತರ ಮಾಡಿದರು. ತಿರುನೆಲ್ಲಿ ದೇವಸ್ವಂ ₹ 5 ಲಕ್ಷ ಮತ್ತು ಶ್ರೀ ತ್ರಿಶ್ಶಿಲೇರಿ ದೇವಸ್ವಂ ₹2 ಲಕ್ಷ ಮೊತ್ತದ ಚೆಕ್‌ ನೀಡಿತು. ಪಾರ್ವತಿ ವಿ.ಎ ಎಂಬವರು ₹1 ಲಕ್ಷದ ಚೆಕ್ ನೀಡಿದರು.

ಮೃತದೇಹಗಳ ಕೊಳೆತ ವಾಸನೆ

                   ದುರಂತ ನಡೆದು ಎರಡು ದಿನಗಳ ಕಳೆಯುತ್ತಿದ್ದಂತೆ ಮುಂಡಕ್ಕೈ ಮತ್ತು ಚೂರಲ್‌ಮಲದಲ್ಲಿ ತುಂಬಿರುವ ಕೆಸರಿನ ಸುತ್ತ ಮೃತದೇಹದ ಕೊಳೆತ ದುರ್ವಾಸನೆ ಬರುತ್ತಿದೆ. ಹೀಗಾಗಿ ಮಣ್ಣಿನಡಿ ಇನ್ನೂ ದೇಹಗಳು ಅಥವಾ ದೇಹದ ಭಾಗಗಳು ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

              'ಮಳೆಗಾಲದಲ್ಲಿ ಇಲ್ಲಿಗೆ ಪ್ರವಾಸಿಗರು ಮತ್ತು ಕರ್ನಾಟಕ, ತಮಿಳುನಾಡು ಭಾಗದ ಕೂಲಿಯಾಗಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕೊಡಗು ಮಾದರಿಯಲ್ಲಿ ಇಲ್ಲೂ ಲೈನ್‌ಮನೆಗಳು ಇರುವುದರಿಂದ ಒಟ್ಟು ಮನೆಗಳು ಎಷ್ಟಿದ್ದವು, ಅವುಗಳ ಒಳಗೆ ಎಷ್ಟು ಜನರಿದ್ದರು ಎಂಬಿತ್ಯಾದಿ ಮಾಹಿತಿ ನಿಖರವಾಗಿ ಇಲ್ಲ. ಆದ್ದರಿಂದ ನಾಪತ್ತೆಯಾದವರ ಮತ್ತು ಸಾವಿಗೀಡಾದವರ ಸಂಖ್ಯೆ ಎಷ್ಟಿರಬಹುದು ಎಂದು ಊಹಿಸುವುದೂ ಕಷ್ಟವಾಗುತ್ತಿದೆ' ಎಂದು ಅಧಿಕಾರಿ
ಯೊಬ್ಬರು ಹೇಳಿದರು.

ಏರುತ್ತಲೇ ಇದೆ ಸಾವಿನ ಸಂಖ್ಯೆ

*ವಯನಾಡ್‌ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಇದುವರೆಗೂ 190 ಮೃತದೇಹಗಳು ಪತ್ತೆಯಾಗಿವೆ

*ಮೃತರಲ್ಲಿ 25 ಮಕ್ಕಳು ಹಾಗೂ 70 ಮಹಿಳೆಯರು

*ಶೋಧಕಾರ್ಯದ ವೇಳೆ 92 ಅಂಗಾಂಗಗಳು ಪತ್ತೆ. ಹೆಚ್ಚಿನವು ಚಾಲಿಯಾರ್‌ ನದಿಯಲ್ಲಿ ದೊರೆತಿವೆ

*ಸ್ಥಳಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಭೇಟಿ

*ಮನೆಗಳು ಸೇರಿದಂತೆ 348 ಕಟ್ಟಡಗಳು ಕುಸಿದಿವೆ

*ಭೂಸೇನೆ, ವಾಯುಪಡೆ, ಎನ್‌ಡಿಆರ್‌ಎಫ್‌, ಪೊಲೀಸ್‌ ಸೇರಿ 1,600ಕ್ಕೂ ಅಧಿಕ ಮಂದಿ ರಕ್ಷಣಾ ಕಾರ್ಯಾ
ಚರಣೆಯಲ್ಲಿ ಭಾಗಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries