ನವದೆಹಲಿ: ದೇಶದಲ್ಲಿ ಜುಲೈ 1ರಿಂದ ಭಾರತೀಯ ನಾಗರಿಕ ಸಂಹಿತೆ (ಬಿಎನ್ಎಸ್) ಜಾರಿಗೆ ಬಂದಿದ್ದು ಇಲ್ಲಿಯವರೆಗೂ ದೇಶಾದ್ಯಂತ 5.56 ಲಕ್ಷಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹೊಸ ಕ್ರಿಮಿನಲ್ ಕಾನೂನುಗಳ ಸುಗಮ ಅನುಷ್ಠಾನಕ್ಕಾಗಿ ಗೃಹ ವ್ಯವಹಾರಗಳ ಸಚಿವಾಲಯವು ವೀಡಿಯೋಗ್ರಫಿ ಮತ್ತು ಛಾಯಾಗ್ರಹಣದ ಮೂಲಕ ಸಾಕ್ಷ್ಯವನ್ನು ಸಂಗ್ರಹಿಸಲು ಇ-ಸಾಕ್ಷ್ಯ ಸೇರಿದಂತೆ ಹಲವಾರು ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ಅನ್ನು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಂಡಿವೆ. ಇಪ್ಪತ್ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಪರೀಕ್ಷಿಸಿವೆ.
ವಸಾಹತುಶಾಹಿ ಯುಗದ ಭಾರತ ದಂಡ ಸಂಹಿತೆ (IPC), ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷಿ ಕಾಯಿದೆ 1872ಗೆ ಬದಲಿಗೆ ಭಾರತೀಯ ನ್ಯಾಯ ಸಂಹಿತಾ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), ಮತ್ತು ಭಾರತೀಯ ಸಾಕ್ಷಿ ಅಧಿನಿಯಮ (BSA)ವನ್ನು ಜಾರಿಗೆ ತರಲಾಗಿದೆ.
ಜುಲೈ 1ರಿಂದ ಸೆಪ್ಟೆಂಬರ್ 3ರವರೆಗೆ ಬಿಎನ್‌ಎಸ್ ಅಡಿಯಲ್ಲಿ ದೇಶದಲ್ಲಿ ಒಟ್ಟು 5.56 ಲಕ್ಷ ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಗೃಹ ಸಚಿವಾಲಯದ ಸಾಧನೆಗಳ ಕುರಿತು ಅವರು ಚರ್ಚಿಸಿದ್ದರು.
ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಯೋಜಿಸಲು, ಇಂಟರ್‌ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ (ICJS) ಗೆ ಸಂಬಂಧಿಸಿದಂತೆ ಅಗತ್ಯ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಅಳವಡಿಸಲಾಗಿದೆ.
ಹೊಸ ಕ್ರಿಮಿನಲ್ ಕಾನೂನುಗಳ ಪ್ರಕಾರ CCTNS (ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್) ನಲ್ಲಿನ ಪ್ರಮುಖ ಬದಲಾವಣೆಗಳೆಂದರೆ ಇ-ಜೈಲು, ಇ-ಫೊರೆನ್ಸಿಕ್ಸ್, ಇ-ಪ್ರಾಸಿಕ್ಯೂಷನ್, ಆಡಿಯೋ-ವೀಡಿಯೋ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಮತ್ತು ಎಲೆಕ್ಟ್ರಾನಿಕ್ ಸಂವಹನ ಸೇರಿದೆ.