ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸ್ವಯಂ ಸೇವಾ ಸಂಸ್ಥೆಯೊಂದು ಭಗತ್ ಸಿಂಗ್ ಅವರ 117ನೇ ಜನ್ಮದಿನಾಚರಣೆಯನ್ನು ಲಾಹೋರ್‌ನಲ್ಲಿ ಶನಿವಾರ ಅದ್ಧೂರಿಯಾಗಿ ಆಚರಿಸಿತು.
ಭಗತ್ ಸಿಂಗ್ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಲಾಹೋರ್‌ನ ಹೈಕೋರ್ಟ್ ಮುಂಭಾಗದಲ್ಲಿ ಕೇಕು ಕತ್ತರಿಸಿ ಭಗತ್ ಸಿಂಗ್ ಅವರ ಜನ್ಮ ದಿನ ಆಚರಿಸಲಾಯಿತು.
ಪ್ರತಿಷ್ಠಾನದ ಮುಖ್ಯಸ್ಥ ಇಮ್ತಿಯಾಜ್ ರಶಿದ್ ಖುರೇಷಿ ಅವರು ಮಾತನಾಡಿ, 'ದೇಶಕ್ಕೆ ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾದ ಮಹಾನ್ ನಾಯಕರಾದ ಭಗತ್ ಸಿಂಗ್ ಅವರನ್ನು ಅವರ ಸ್ನೇಹಿತರಾದ ರಾಜಗುರು ಹಾಗೂ ಸುಖದೇವ್ ಸಹಿತ 1931ರಲ್ಲಿ ಬ್ರಿಟಿಷರು ಗಲ್ಲಿಗೇರಿಸಿದರು. ನ್ಯಾಯದ ಹಾದಿಯಲ್ಲಿ ಹೋರಾಟ ನಡೆಸುತ್ತಿದ್ದ ಈ ಮೂವರನ್ನು ಗಲ್ಲಿಗೇರಿಸಿದ್ದು ಅನ್ಯಾಯ. ಈ ಪ್ರಕಣ ಕುರಿತು ಮರು ವಿಚಾರಣೆ ನಡೆಸುವಂತೆ ಹಾಗೂ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ 2013ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ನ್ಯಾಯ ಸಿಗುವ ಭರವಸೆ ಇದೆ' ಎಂದರು.
'ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳು ಈ ವೀರ ಹೋರಾಟಗಾರನಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಬೇಕು' ಎಂದು ಆಗ್ರಹಿಸಿದರು. ಭಾರತದಲ್ಲಿ ಭಾರತ ರತ್ನ ಹಾಗೂ ಪಾಕಿಸ್ತಾನದಲ್ಲಿ ನಿಶಾನ್ ಎ ಪಾಕಿಸ್ತಾನ್ ಪ್ರಶಸ್ತಿಗಳು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ.
'ಭಗತ್ ಸಿಂಗ್ ಅವರ ನೆನಪಿನಲ್ಲಿ ಅಂಚೆ ಚೀಟಿ ಹೊರತರಬೇಕು. ಪ್ರಮುಖ ರಸ್ತೆಗಳಿಗೆ ಅವರ ಹೆಸರನ್ನಿಡಬೇಕು' ಎಂದು ಆಗ್ರಹಿಸಿದರು.
ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಕಾರ್ಯಕಾರಿ ಸಮಿತಿಯ ಸದಸ್ಯ ಮಿಯಾ ಗುಲಾಮುಲ್ಲಾ ಜೋಯಿಯಾ ಅವರು ಮಾತನಾಡಿ, 'ಭಗತ್ ಸಿಂಗ್ ಅವರು ಪಾಕಿಸ್ತಾನದ ಜನರ ಹೃದಯದಲ್ಲಿ ಸದಾ ಇದ್ದಾರೆ. ಭಗತ್ ಸಿಂಗ್ ಅವರ ತ್ಯಾಗ ಹಾಗೂ ಬಲಿದಾನವನ್ನು ಹೆಚ್ಚು ಜನರಿಗೆ ತಿಳಿಸುವ ಕೆಲಸವನ್ನು ಮಾಡಲಾಗುವುದು' ಎಂದರು.
ಕ್ರಾಂತಿಯ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಭಗತ್ ಸಿಂಗ್ ಅವರನ್ನು 1931ರಲ್ಲಿ ಬ್ರಿಟಿಷರು ಗಲ್ಲಿಗೇರಿಸಿದರು. ಆಗ ಅವರಿಗೆ 23 ವರ್ಷ ವಯಸ್ಸಾಗಿತ್ತು. ಅವರ ಧೈರ್ಯ, ಸಾಹಸ ಹಾಗೂ ಬಲಿದಾನವನ್ನು ಉಭಯ ರಾಷ್ಟ್ರಗಳ ನಾಗರಿಕರು ಸ್ಮರಿಸುತ್ತಿದ್ದು, ಯುವಜನತೆಯ ಆದರ್ಶವಾಗಿದ್ದಾರೆ.