ಆಗ್ರಾ: ಉತ್ತರ ಪ್ರದೇಶದ ಶಾಲೆಯೊಂದರ ಏಳಿಗೆಗಾಗಿ 11 ವರ್ಷದ ಬಾಲಕನನ್ನು ಅದರ ಮಾಲೀಕ ಬಲಿ ನೀಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಶಾಲೆಯ ನಿರ್ದೇಶಕ, ಮಾಲೀಕ, ಪ್ರಾಂಶುಪಾಲ ಹಾಗೂ ಇಬ್ಬರು ಶಿಕ್ಷಕರನನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎರಡನೇ ತರಗತಿಯ ವಿದ್ಯಾರ್ಥಿಯನ್ನು ಬಲಿ ನೀಡಲಾಗಿದ್ದು, ಕತ್ತು ಹಿಸುಕಿ ಕೃತ್ಯ ಎಸಗಲಾಗಿದೆ.
ಡಿ.ಎಲ್ ಪಬ್ಲಿಕ್ ಸ್ಕೂಲ್‌ನ ಮಾಲೀಕನಾದ ಜಸೋಧನ್ ಸಿಂಗ್‌ಗೆ 'ತಂತ್ರ ಆಚರಣೆ'ಗಳ ಬಗ್ಗೆ ನಂಬಿಕೆಯಿದ್ದು, ಶಾಲೆ ಹಾಗೂ ಆತನ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಮಗುವನ್ನು ಬಲಿಕೊಡಬೇಕು ಎಂದು ಪುತ್ರ ಹಾಗೂ ಶಾಲೆಯ ನಿರ್ದೇಶಕ ದಿನೇಶ್ ಬಘೇಲ್‌ಗೆ ಹೇಳಿದ್ದ. ಈ ಕೃತ್ಯಕ್ಕೆ ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್, ಶಿಕ್ಷಕರಾದ ರಾಮಪ್ರಕಾಶ ಸೋಲಂಕಿ ಹಾಗೂ ವೀರ್‌ಪಾಲ್ ಸಿಂಗ್ ಸಹಾಯ ಮಾಡಿದ್ದರು.
ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೀಡಾದ ವಿದ್ಯಾರ್ಥಿ ಕೃತಾರ್ಥ್ (11) ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ಹಾಥ್ರಸ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
'ಸೆ.23ರಂದು ಶಿಕ್ಷಕ ರಾಮಪ್ರಕಾಶ್ ಸೋಲಂಕಿ, ದಿನೇಶ್ ಬಘೇಲ್ ಹಾಗೂ ಮಾಲೀಕ ಜಸೋಧನ್ ಸಿಂಗ್ ಸೇರಿ ವಿದ್ಯಾರ್ಥಿಯನ್ನು ಶಾಲೆಯ ಹಾಸ್ಟೆಲ್‌ನಿಂದ ಅಪಹರಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ತಂತ್ರ ಆಚರಣೆ ವೇಳೆ ವಿದ್ಯಾರ್ಥಿಯನ್ನು ಬಲಿಕೊಡಲು ಜಸೋಧನ್ ತನ್ನ ಪುತ್ರನಿಗೆ ಹೇಳಿದ್ದಾನೆ. ಆತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ' ಎಂದು ಅವರು ಹೇಳಿದ್ದಾರೆ.
'ಘಟನೆ ನಡೆಯುವ ವೇಳೆ ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಹಾಗೂ ಶಿಕ್ಷಕ ವೀರ್‌ಪಾಲ್ ಸಿಂಗ್ ಸ್ಥಳದಲ್ಲಿ ಕಾವಲು ಕಾಯುತ್ತಿದ್ದರು' ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
'ಕೃತಾರ್ಥ್ ಅನಾರೋಗ್ಯಕ್ಕೀಡಾಗಿದ್ದಾಗಿಯೂ, ಆತನನ್ನು ಬಘೇಲ್ ಅವರ ಕಾರಿನಲ್ಲಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಲಾಗುತ್ತಿದ್ದೆಯೆಂದೂ ಆತನ ಪೋಷಕರಿಗೆ ತಿಳಿಸಲಾಗಿತ್ತು. ಪೋಷಕರು ಕಾರನ್ನು ತಡೆದು ನಮಗೆ ಮಾಹಿತಿ ನೀಡಿದರು' ಎಂದು ಪೊಲೀಸರು ಹೇಳಿದ್ದಾರೆ.
ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಖಚಿತವಾಗಿದೆ. ಶಾಲೆಯ ಹಾಗೂ ಅದರ ಮಾಲೀಕನ ಕುಟುಂಬದ ಸಮೃದ್ಧಿಗಾಗಿ ಬಲಿಯರ್ಪಿಸಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.