ತಿರುವನಂತರಪುರ: ಆರ್ಥಿಕ ವಿಷಯಗಳ ಕುರಿತು ಚರ್ಚಿಸಲು, ವಿರೋಧ ಪಕ್ಷಗಳು ಆಡಳಿತದಲ್ಲಿರುವ ಐದು ರಾಜ್ಯಗಳ ಪ್ರತಿನಿಧಿಗಳ ಸಮಾವೇಶವನ್ನು ಕೇರಳ ಸರ್ಕಾರ ಆಯೋಜಿಸಿದೆ. 16ನೇ ಹಣಕಾಸು ಆಯೋಗದ ಮುಂದೆ ಮಂಡಿಸಬೇಕಿರುವ ಆರ್ಥಿಕ ಅಗತ್ಯಗಳ ಕುರಿತು ಇಲ್ಲಿ ಚರ್ಚಿಸಲಾಗುವುದು ಎಂದು ಕೇರಳದ ಹಣಕಾಸು ಸಚಿವರಾದ ಕೆ.ಎನ್.ಬಾಲಗೋಪಾಲ್ ಗುರುವಾರ ತಿಳಿಸಿದರು.
ಎಡರಂಗದ ಆಡಳಿತವಿರುವ ಕೇರಳ, ಡಿಎಂಕೆ ಆಡಳಿತವಿರುವ ತಮಿಳುನಾಡು, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮತ್ತು ತೆಲಂಗಾಣ ಹಾಗೂ ಎಎಪಿ ಆಡಳಿತವಿರುವ ಪಂಜಾಬ್ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ 12ರಂದು ನಡೆಯುವ ಸಮಾವೇಶವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ದೇಶದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಹಂಚಿಕೆ ಮತ್ತು ಸಹಕಾರವನ್ನು ರಕ್ಷಿಸುವ ಮತ್ತು ಬಲಪಡಿಸುವ ಉದ್ದೇಶವನ್ನು ಈ ಸಮಾವೇಶ ಹೊಂದಿದೆ ಎಂದು ಬಾಲಗೋಪಾಲ್ ಹೇಳಿದರು.
ತೆಲಂಗಾಣದ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದ ಭಟ್ಟಿ ವಿಕ್ರಮಾರ್ಕ ಮಲ್ಲು, ಕರ್ನಾಟದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪಂಜಾಬ್‌ನ ಹಣಕಾಸು ಸಚಿವರಾದ ಹರ್‌ಪಾಲ್ ಸಿಂಗ್ ಚೀಮಾ, ತಮಿಳುನಾಡಿನ ಹಣಕಾಸು ಸಚಿವರಾದ ತಂಗಂ ತೆನ್ನರಸು ಮತ್ತು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅದರ ಜತೆಗೆ ಐದೂ ರಾಜ್ಯಗಳ ಹಣಕಾಸು ಇಲಾಖೆಗಳ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.