ಅನೂಪ್‌ಪುರ: ಮಧ್ಯಪ್ರದೇಶದ ಅನೂಪ್‌ಪುರ ಜಿಲ್ಲೆಯ ಓರಿಯಂಟ್ ಪೇಪರ್ ಮಿಲ್ (ಒಪಿಎಂ) ಕಾರ್ಖಾನೆಯಲ್ಲಿ ಶನಿವಾರ ರಾತ್ರಿ ಕ್ಲೋರಿನ್ ಅನಿಲ ಸೋರಿಕೆಯಾಗಿ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಅಮಲಾಯಿ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿರುವ ವಿಚಾರ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಗಮನಕ್ಕೆ ಬಂದಿದೆ' ಎಂದು ಜಿಲ್ಲಾಧಿಕಾರಿ ಹರ್ಷಲ್ ಪಾಂಚೋಲಿ ತಿಳಿಸಿದ್ದಾರೆ.
'ತಕ್ಷಣವೇ ಅನಿಲ ಸೋರಿಕೆ ತಡೆಗಟ್ಟುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಿಗಾ ವಹಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
'ಅನಿಲ ಸೋರಿಕೆಯಿಂದಾಗಿ 20 ಮಂದಿಗೆ ಕಣ್ಣಿನ ತೊಂದರೆ ಕಾಣಿಸಿಕೊಂಡಿತು' ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಪೈಕಿ 12 ಮಂದಿ ಅಸ್ವಸ್ಥರನ್ನು ಶಹದೋಲ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.