ವಾಷಿಂಗ್ಟನ್/ವೆಸ್ಟ್ ಪಾಮ್ ಬೀಚ್: ಅಮೆರಿಕದ ಮಾಜಿ ಅಧ್ಯಕ್ಷ, ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನಿಸಿದ್ದ ಶಂಕಿತ ವ್ಯಕ್ತಿ, ಘಟನೆಗೂ ಮೊದಲು 12 ಗಂಟೆಗಳ ಕಾಲ ಗಾಲ್ಫ್ ಮೈದಾನದ ಹೊರಗೆ ಠಿಕಾಣಿ ಹೂಡಿದ್ದ ಎಂದು ಕೋರ್ಟ್‌ಗೆ ಸೋಮವಾರ ಸಲ್ಲಿಕೆಯಾಗಿರುವ ದಾಖಲೆಗಳು ಹೇಳುತ್ತವೆ.
ಹತ್ಯೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ರ‍್ಯಾನ್ ವೆಸ್ಲಿ ರೂತ್, ಆಹಾರ ಮತ್ತು ರೈಫಲ್‌ನೊಂದಿಗೆ ಮೈದಾನದ ಹೊರಗೆ ಟ್ರಂಪ್ ಅವರಿಗಾಗಿ ಕಾಯುತ್ತಿದ್ದ ಎಂದೂ ಈ ದಾಖಲೆಗಳು ಹೇಳುತ್ತವೆ.
ಈ ಘಟನೆಗೆ ಸಂಬಂಧಿಸಿ, ವೆಸ್ಟ್ ಪಾಮ್ ಬೀಚ್‌ನ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ರೂತ್ ಹಾಜರಾಗಿದ್ದರು.
ಒತ್ತಡ: ಟ್ರಂಪ್ ಅವರ ಹತ್ಯೆಗೆ ನಡೆದ ಯತ್ನವು, ಅಮೆರಿಕದ ರಾಜಕೀಯ ಮುಖಂಡರ ರಕ್ಷಣೆಯ ಹೊಣೆ ಹೊತ್ತಿರುವ ಸೀಕ್ರೆಟ್ ಸರ್ವಿಸ್ ಸಂಸ್ಥೆ ಎದುರಿಸುತ್ತಿರುವ ಒತ್ತಡದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.
ಸಂಸ್ಥೆಯಲ್ಲಿ ಸದ್ಯ 400 ಸಿಬ್ಬಂದಿ ಇದ್ದಾರೆ. ಮಂಜೂರಾದ ಹುದ್ದೆಗಳಿಗಿಂತ ಕಡಿಮೆ ಸಿಬ್ಬಂದಿಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಟ್ರಂಪ್ ಹತ್ಯೆ: ಇರಾನ್‌ಗೆ ಒತ್ತಾಯಿಸಿದ್ದ ಶಂಕಿತ
ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ರ‍್ಯಾನ್ ವೆಸ್ಲಿ ರೂತ್ ಟ್ರಂಪ್ ಅವರನ್ನು ಕೊಲ್ಲುವಂತೆ ಇರಾನ್‌ಗೆ ಒತ್ತಾಯಿಸಿದ್ದರು! ಅವರು ರಚಿಸಿರುವ 'ಉಕ್ರೇನ್ಸ್ ಅನ್‌ವಿನ್ನೇಬಲ್ ವಾರ್' ಎಂಬ ಕೃತಿಯಲ್ಲಿ ರೂತ್ ಈ ಬಗ್ಗೆ ಬರೆದಿದ್ದಾರೆ. ಕಳೆದ ವರ್ಷ ಸ್ವತಃ ಅವರೇ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. 2021ರ ಜನವರಿ 6ರಂದು ನಡೆದಿದ್ದ ಗಲಭೆ ಹಾಗೂ ಇರಾನ್ ಅಣ್ವಸ್ತ್ರ ಕುರಿತು ಇರಾನ್ ಮೇಲೆ ನಿರ್ಬಂಧ ಹೇರಿದ್ದು ದೊಡ್ಡ ಪ್ರಮಾದ ಎಂದು ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವ ರೂತ್ ಈ ವಿಚಾರವಾಗಿ ಡೊನಾಲ್ಟ್ ಟ್ರಂಪ್ ಅವರನ್ನು ಒಬ್ಬ 'ಮೂರ್ಖ' ಹಾಗೂ 'ವಿದೂಷಕ' ಎಂಬುದಾಗಿ ಟೀಕಿಸಿದ್ದಾರೆ. 'ಟ್ರಂಪ್ ಅವರನ್ನು ಕೊಲ್ಲಲು ನೀವು ಸ್ವತಂತ್ರರು' ಎಂದು ಇರಾನ್ ಉದ್ದೇಶಿಸಿ ಹೇಳಿದ್ದಾರೆ. ರಷ್ಯಾ ವಿರುದ್ಧ ಹೋರಾಡುತ್ತಿರುವ ಉಕ್ರೇನ್‌ಗಾಗಿ ಯೋಧರನ್ನು ನೇಮಕ ಮಾಡಲು ಯತ್ನಿಸಿದ್ದಾಗಿಯೂ ಅವರು ತಮ್ಮ ಕೃತಿಯಲ್ಲಿ ಬರೆದುಕೊಂಡಿದ್ದಾರೆ.
ಪ್ರಚಾರಕ್ಕೆ ಮರಳಿದ ಟ್ರಂಪ್
ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಚುನಾವಣೆ ಪ್ರಚಾರಕ್ಕೆ ಮರಳಿದ್ದಾರೆ. ಭಾನುವಾರ ಫ್ಲಾರಿಡಾದಲ್ಲಿ ಅವರ ಹತ್ಯೆಗೆ ಯತ್ನ ನಡದಿತ್ತು. ಈ ಘಟನೆ ನಡೆದ ಎರಡು ದಿನಗಳ ನಂತರ ಅವರು ಮಿಚಿಗನ್‌ಗೆ ತೆರಳಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.