ಮುಂಬೈ: ವಿದ್ಯುತ್ ತಂತಿಯ ಸ್ಪರ್ಶದಿಂದ ಬಲಗೈ ಕಳೆದುಕೊಂಡಿದ್ದ ಇಲ್ಲಿನ ಗೋರೆಗಾಂವ್‌ನ 15 ವರ್ಷದ ಬಾಲಕಿ ಈಗ ಹೊಸ ಕೈ ಪಡೆದಿದ್ದಾರೆ. ಜಾಗತಿಕವಾಗಿ ಇದೇ ಮೊದಲ ಬಾರಿಗೆ ಭುಜ ಮಟ್ಟದವರೆಗಿನ ಅಂಗ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬಾಲಕಿಯ ಪೋಷಕರಲ್ಲಿ ಸಂತಸ ಮೂಡಿಸಿದೆ.
ಅನಮ್ತಾ ಅಹ್ಮದ್ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕಿ. ಇಲ್ಲಿನ ಪರೇಲ್‌ನಲ್ಲಿರುವ ಗ್ಲೆನೆಗಲ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ, ಕೈ ಮತ್ತು ಪುನರ್ ಜೋಡಣಾ ಮೈಕ್ರೋ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ನಿಲೇಶ್ ಸತ್ಭಾಯ್ ಅವರ ತಂಡ ಸುಮಾರು 12 ಗಂಟೆಗಳವರೆಗೆ ಈ ಶಸ್ತ್ರಚಿಕಿತ್ಸೆ ನಡೆಸಿದೆ.
ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಮತ್ತು 'ಬ್ರೈನ್ ಡೆಡ್' ಎಂದು ಘೋಷಿಸಲಾಗಿದ್ದ ಸೂರತ್‌ನ 9 ವರ್ಷದ ಬಾಲಕಿಯು ಅನಮ್ತಾಗೆ ತನ್ನ ಅಂಗವನ್ನು ದಾನ ಮಾಡಿದ್ದಾರೆ.
ಏನಾಗಿತ್ತು:
ಅನಮ್ತಾ 13 ವರ್ಷದವರಿದ್ದಾಗ (2022) ತಮ್ಮ ಊರಾದ ಉತ್ತರ ಪ್ರದೇಶದ ಅಲಿಘಡಕ್ಕೆ ತೆರಳಿದ್ದರು. ಅಲ್ಲಿ ಸೋದರ ಸಂಬಂಧಿಗಳ ಜತೆ ಆಟ ಆಡುತ್ತಿದ್ದಾಗ, ಮಹಡಿ ಮೇಲಿನ 11 ಕೆ.ವಿ ತಂತಿಯ ಸ್ಪರ್ಶವಾಗಿ, ಬಲಗೈಗೆ ಗಂಭೀರ ಸುಟ್ಟು ಗಾಯಗಳಾಗಿದ್ದವು. ಅದು ಗ್ಯಾಂಗ್ರೀನ್ ಆಗಿ ಪರಿವರ್ತನೆಯಾಗಿದ್ದರಿಂದ ಮೂರು ಬಾರಿ ಕೈಯನ್ನು ಶಸ್ತ್ರಚಿಕಿತ್ಸೆ ಮೂಲಕ ತುಂಡರಿಸಬೇಕಾಯಿತು. ವಿದ್ಯುತ್ ಸ್ಪರ್ಶದ ವೇಳೆ ಬಾಲಕಿಯ ಎಡಗೈಗೂ ಗಂಭೀರ ಗಾಯಗಳಾಗಿದ್ದವು.
ಪೋಷಕರ ಅಲೆದಾಟ:
ಬಾಲಕಿಯ ಈ ಸಂಕೀರ್ಣ ಸಮಸ್ಯೆಗೆ ಕೈ ಕಸಿಯಷ್ಟೇ ಸೂಕ್ತ ಪರಿಹಾರ ಎಂಬುದನ್ನು ಕಂಡುಕೊಂಡ ಪೋಷಕರು, ದೇಶದ ವಿವಿಧ ಆಸ್ಪತ್ರೆಗಳಿಗೆ, ಸಿಂಗಪುರ ಮತ್ತು ಥಾಯ್ಲೆಂಡ್‌ನ ಕೆಲ ಆಸ್ಪತ್ರೆಗೆಳಿಗೆ ಭೇಟಿ ನಿಡಿ ಚಿಕಿತ್ಸೆಗಾಗಿ ಪ್ರಯತ್ನಿಸಿದ್ದರು. ಅದರೆ ಬಾಲಕಿಯ ಬಲಗೈ ಬುಜದವರೆಗೆ ಕತ್ತರಿಸಿದ್ದರಿಂದ ಬಹುತೇಕ ಆಸ್ಪತ್ರೆಯವರು ಕೈ ಕಸಿ ಮಾಡಲು ನಿರಾಕರಿಸಿದ್ದರು. ಅಂತಿಮವಾಗಿ ಮುಂಬೈನ ಗ್ಲೆನೆಗಲ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಪೋಷಕರು ಡಾ. ಸತ್ಭಾಯ್ ಅವರನ್ನು ಸಂಪರ್ಕಿಸಿದರು.
'ಎರಡು ವರ್ಷಗಳವರೆಗೆ ಕಾದ ಬಳಿಕ ನಮ್ಮ ಪ್ರಾರ್ಥನೆಗೆ ಉತ್ತರ ದೊರೆತಿರುವುದು ಪವಾಡವೇ ಸರಿ. ಇದರಿಂದ ನಮಗೆ ಸಂತಸವಾಗಿದೆ. ತನಗೆ ಕೈ ಮರಳಿ ಬರುತ್ತದೆ ಎಂಬ ವಿಷಯ ತಿಳಿದಾಗ, ಮಗಳೂ ಅಳು ತಡೆದುಕೊಳ್ಳಲಿಲ್ಲ. ಬಳಿಕ ಸಮಾಧಾನದ ನಿಟ್ಟುಸಿರು ಬಿಟ್ಟಳು' ಎಂದು ಚಲನಚಿತ್ರ ನಿರ್ಮಾಪಕರೂ ಆದ ಬಾಲಕಿಯ ತಂದೆ ಅಕೀಲ್ ಅಹ್ಮದ್ ಪ್ರತಿಕ್ರಿಯಿಸಿದರು.
ಇದೀಗ, ಶಸ್ತ್ರಚಿಕಿತ್ಸೆಯ ಬಳಿಕ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಶಾಲೆಗೆ ಮರಳುವುದನ್ನೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.
ಸಂಕೀರ್ಣ ಕಸಿ ಕಾರ್ಯಕ್ಕೆ ಸಮ್ಮತಿ ಸೂಚಿಸಿದ ಗ್ಲೆನೆಗಲ್ಸ್ ವೈದ್ಯರ ತಂಡ, ಹಲವು ಸವಾಲುಗಳನ್ನು ಮೆಟ್ಟಿ ಯಶಸ್ವಿಯಾಗಿ ಈ ಕಾರ್ಯ ಪೂರ್ಣಗೊಳಿಸಿತು. 'ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ಐಸಿಯುನಲ್ಲಿ ನಿಗಾದಲ್ಲಿರಿಸಲಾಗಿದೆ. ಸದ್ಯದಲ್ಲಿಯೇ ಅವರಿಗೆ ಫಿಸಿಯೋಥೆರಪಿ ಮತ್ತು ಪುನಶ್ಚೇತನ ಚಿಕಿತ್ಸೆ ಆರಂಭಿಸಲಾಗುವುದು. ಕಸಿ ಬಳಿಕ ಸಮರ್ಪಕ ಕಾರ್ಯನಿರ್ವಹಣೆಗೆ 9ರಿಂದ 12 ತಿಂಗಳು ಬೇಕಾಗುತ್ತದೆ' ಎಂದು ವೈದ್ಯ ಡಾ. ಸತ್ಭಾಯ್ ತಿಳಿಸಿದರು.