HEALTH TIPS

ಆಂಧ್ರದಲ್ಲಿ 13,227 ಜನರ ಸ್ಥಳಾಂತರ

            ಮರಾವತಿ: ಭಾರೀ ಮಳೆಯ ಕಾರಣ ಆಂಧ್ರ ಪ್ರದೇಶದ ಐದು ಜಿಲ್ಲೆಗಳ 294 ಗ್ರಾಮಗಳಿಂದ 13,227 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಆಂಧ್ರ ಪ್ರದೇಶದ ಗೃಹ ಸಚಿವರಾದ ವಂಗಲಪುಡಿ ಅನಿತಾ ತಿಳಿಸಿದ್ದಾರೆ.

100 ಪುನರ್ವಸತಿ ಕೇಂದ್ರಗಳು:

            ಆಂಧ್ರದ ಕೃಷ್ಣಾ, ಎನ್‌ಟಿಆರ್‌, ಬಾಪಟ್ಲಾ, ಗುಂಟೂರು ಮತ್ತು ಪಲ್ನಾಡು ಜಿಲ್ಲೆಗಳಲ್ಲಿ 100 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 61 ವೈದ್ಯಕೀಯ ಶಿಬಿರಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಗೃಹ ಸಚಿವರು ವಿವರಿಸಿದ್ದಾರೆ.

           'ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಪೊಲೀಸ್‌, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡಗಳು ರಕ್ಷಣಾ ಕಾರ್ಯ ಕೈಗೊಂಡಿವೆ' ಎಂದು ಅವರು ಹೇಳಿದ್ದಾರೆ.


            'ಸುಮಾರು 62,644 ಹೆಕ್ಟೇರ್‌ ಭತ್ತದ ಬೆಳೆ ಮತ್ತು 7,218 ಹೆಕ್ಟೇರ್‌ ತೋಟಗಾರಿಕಾ ಪ್ರದೇಶ ಮಳೆಯಿಂದ ನಾಶವಾಗಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.

            ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಹಿರಿಯ ಅಧಿಕಾರಿಗಳ ಜತೆ ಮಳೆ ಹಾನಿ ಮತ್ತು ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಪ್ರವಾಹ ಕುರಿತು ಮಾಹಿತಿ ರವಾನಿಸಲು ತಂತ್ರಜ್ಞಾನದ ನೆರವು ಪಡೆಯುವಂತೆ ಮತ್ತು ಸಂತ್ರಸ್ತರಿಗೆ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರೈಲು ಸಂಚಾರ ರದ್ದು:

             ತೆಲಂಗಾಣದ ವಿವಿಧೆಡೆ ಭಾರೀ ಮಳೆ ಮತ್ತು ರೈಲು ಹಳಿಗಳ ಮೇಲೆ ನೀರು ನಿಂತ ಕಾರಣ 99 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ನಾಲ್ಕು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದ್ದು, 54 ರೈಲುಗಳ ಸಂಚಾರದ ಮಾರ್ಗವನ್ನು ಬದಲಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

           'ಖಮ್ಮಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ 110 ಗ್ರಾಮಗಳು ಜಲಾವೃತವಾಗಿವೆ. 9 ಜನರು ಇಲ್ಲಿನ ಪ್ರಕಾಶ್‌ ನಗರದ ಗುಡ್ಡದಲ್ಲಿ, 68 ಜನರು ಅಜ್ಮೀರಾ ತಾಂಡಾದ ಗುಡ್ಡದಲ್ಲಿ ಹಾಗೂ 42 ಜನರು ವಿವಿಧ ಕಟ್ಟಡಗಳಲ್ಲಿ ಸಿಲುಕಿದ್ದಾರೆ' ಎಂದು ಕೇಂದ್ರ ಸಚಿವ ಬಂಡಿ ಸಂಜಯ್‌ ಕುಮಾರ್ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಮಾಹಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದ್ದಾರೆ.

               ಗೃಹ ಸಚಿವರ ಆದೇಶದ ಮೇರೆಗೆ ಚೆನ್ನೈ, ವಿಶಾಖಪಟ್ಟಣಂ ಮತ್ತು ಅಸ್ಸಾಂ ತಲಾ ಮೂರು ಎನ್‌ಡಿಆರ್‌ಎಫ್‌ ತಂಡಗಳನ್ನು (ಒಟ್ಟು 9 ತಂಡ) ರಕ್ಷಣಾ ಕಾರ್ಯಾಚರಣೆಗೆಂದು ತೆಲಂಗಾಣಕ್ಕೆ ಕಳುಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

              ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರು ಸಚಿವರು, ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಿದ್ದಾರೆ.

 ವಿಜಯವಾಡದ ಪ್ರವಾಹಪೀಡಿತವಾಗಿರುವ ಪ್ರದೇಶ ಪಿಟಿಐ ಚಿತ್ರ ವಿಜಯವಾಡದ ಪ್ರವಾಹಪೀಡಿತ ಪ್ರದೇಶಗಳನ್ನು ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ದೋಣಿಯಲ್ಲಿ ತೆರಳಿ ಪರಿಶೀಲಿಸಿದರು. ಪಿಟಿಐ ಚಿತ್ರ

         ಗುಜರಾತ್‌ನಲ್ಲಿ ಮಳೆ: 24 ಮೊಸಳೆಗಳ ರಕ್ಷಣೆ ವಡೋದರಾ

             ಆಗಸ್ಟ್ 27ರಿಂದ 29ರವರೆಗೆ ಸುರಿದ ಭಾರಿ ಮಳೆಯಿಂದಾಗಿ ವಿಶ್ವಾಮಿತ್ರಿ ನದಿಯಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ವಡೋದರ ನಗರದ ವಸತಿ ಪ್ರದೇಶಗಳಲ್ಲಿ ಮೊಸಳೆಗಳು ಕಂಡು ಬಂದಿವೆ. ಈ ಅವಧಿಯಲ್ಲಿ ನಗರದ ವಿವಿಧ ವಸತಿ ಪ್ರದೇಶಗಳಲ್ಲಿ ಒಟ್ಟು 24 ಮೊಸಳೆಗಳನ್ನು ಸಂರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ವಿಶ್ವಾಮಿತ್ರಿ ನದಿಯಲ್ಲಿ 440ಕ್ಕೂ ಹೆಚ್ಚು ಮೊಸಳೆಗಳಿವೆ. ಅಜ್ವಾ ಅಣೆಕಟ್ಟಿಯಿಂದ ನೀರು ಹರಿಸಿದ್ದರಿಂದ ನದಿಯಲ್ಲಿ ಪ್ರವಾಹ ಉಂಟಾಗಿ ಹಲವು ಮೊಸಳೆಗಳು ವಸತಿ ಪ್ರದೇಶಗಳತ್ತ ಬಂದಿವೆ ಎಂದು ವಡೋದರ ವಲಯ ಅರಣ್ಯಾಧಿಕಾರಿ ಕರಣ್‌ಸಿನ್ಹಾ ರಜಪೂತ್‌ ತಿಳಿಸಿದ್ದಾರೆ. 24 ಮೊಸಳೆಗಳೇ ಅಲ್ಲದೆ ಇತರ 75 ಪ್ರಾಣಿಗಳನ್ನೂ ಈ ಅವಧಿಯಲ್ಲಿ ರಕ್ಷಿಸಲಾಗಿದೆ. ಈ ಪೈಕಿ ನಾಗರಹಾವು ಸೇರಿದಂತೆ ವಿವಿಧ ಬಗೆಯ ಹಾವುಗಳು ದೊಡ್ಡ ಗಾತ್ರದ ಐದು ಆಮೆಗಳು (ತಲಾ ಸುಮಾರು 40 ಕೆ.ಜಿ ಗಾತ್ರದವು) ಒಂದು ಮುಳ್ಳುಹಂದಿಯನ್ನೂ ರಕ್ಷಿಸಲಾಗಿದೆ' ಎಂದು ಅವರು ವಿವರಿಸಿದರು.

ಗುಜರಾತ್‌ಗೆ ಅಂತರ ಸಚಿವಾಲಯ ತಂಡ

               ನವದೆಹಲಿ: ಗುಜರಾತಿನಲ್ಲಿ ಆಗಸ್ಟ್‌ 25ರಿಂದ 30ರನಡುವೆ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಆಗಿರುವ ನಷ್ಟದ ಪ್ರಮಾಣವನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರ ನೇತೃತ್ವದಲ್ಲಿ ಅಂತರ ಸಚಿವಾಲಯ ತಂಡವನ್ನು (ಐಎಂಸಿಟಿ) ರಚಿಸಿದೆ. ಈ ತಂಡವು ಸದ್ಯದಲ್ಲಿಯೇ ಗುಜರಾತಿನ ಮಳೆ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಮಳೆಯಿಂದಾಗಿರುವ ನಷ್ಟವನ್ನು ಅಂದಾಜು ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಆಗಸ್ಟ್‌ 26 ಮತ್ತು 27ರಂದು ಸುರಿದ ತೀವ್ರ ಮಳೆಗೆ ಗುಜರಾತ್ ರಾಜ್ಯದಲ್ಲಿ ಕನಿಷ್ಠ 25 ಜನರು ಮೃತಪಟ್ಟಿದ್ದರು. ಮಧ್ಯಪ್ರದೇಶ ರಾಜಸ್ಥಾನದಲ್ಲೂ ಈ ವರ್ಷ ಭಾರಿ ಮಳೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟ ಮತ್ತು ಭೂಕುಸಿತಗಳಿಂದ ವ್ಯಾಪಕ ಹಾನಿಯಾಗಿದೆ. ಈ ರಾಜ್ಯಗಳ ಹಿರಿಯ ಅಧಿಕಾರಿಗಳ ಜತೆ ಗೃಹ ಸಚಿವಾಲಯ ಸಂಪರ್ಕದಲ್ಲಿದ್ದು ಅವರು ತೀವ್ರ ಹಾನಿಯ ಕುರಿತು ವರದಿ ಮಾಡಿದರೆ ಐಎಂಸಿಟಿಯನ್ನು ಅಲ್ಲಿಗೂ ನಿಯೋಜಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.

ಅಸ್ಸಾಂನಲ್ಲಿ ಭಾರಿ ಮಳೆ

             ಅಸ್ಸಾಂನ ಗುವಾಹಟಿಯ ವಿವಿಧೆಡೆ ಭಾನುವಾರ ಭಾರಿ ಪ್ರಮಾಣದ ಮಳೆ ಸುರಿದಿದೆ. ಇದರಿಂದ ನಗರದ ಹಲವು ಪ್ರಮುಖ ರಸ್ತೆಗಳು ಮತ್ತು ವಸತಿ ಪ್ರದೇಶಗಳು ಜಲಾವೃತವಾಗಿ ವಾಹನ ಸಂಚಾರ ದುಸ್ತರವಾಗಿತ್ತು. ಕೆಲ ಪ್ರದೇಶಗಳಲ್ಲಿ ಮೊಣಕಾಲು ಮಟ್ಟದವರೆಗೆ ನೀರು ನಿಂತಿದ್ದರೆ ಇನ್ನೂ ಕೆಲವೆಡೆ ಎದೆಮಟ್ಟದವರೆಗೆ ನೀರು ನಿಂತಿತ್ತು. ರಾಜಸ್ಥಾನ ರಾಜ್ಯದ ವಿವಿಧೆಡೆಯೂ ಭಾನುವಾರ ಭಾರಿ ಮಳೆ ಸುರಿದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries