ಮಲಪ್ಪುರಂ: ಕಳೆದ ವಾರ ಸಾವನ್ನಪ್ಪಿದ ಯುವಕನ ಸಾವು ನಿಪಾ ಸೋಂಕಿನಿಂದ ಎಂಬ ಶಂಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿದ್ಧಪಡಿಸಿರುವ ಸಂಪರ್ಕ ಪಟ್ಟಿಯಲ್ಲಿ 151 ಮಂದಿ ಇದ್ದಾರೆ ಎಂದು ವರದಿಯಾಗಿದೆ.
ಮೊದಲ ಪಟ್ಟಿಯಲ್ಲಿ 26 ಮಂದಿ ಇದ್ದರು. ಬಳಿಕ ಅದನ್ನು ವಿಸ್ತರಿಸಲಾಯಿತು. ಸದ್ಯ 151 ಮಂದಿ ನಿಗಾದಲ್ಲಿದ್ದಾರೆ.
ಕೋಝಿಕ್ಕೋಡ್‍ನಲ್ಲಿ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ತಿರುವಳ್ಳಿ ಪಂಚಾಯತ್‍ನ ಜನಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ತಡೆಗಟ್ಟುವ ಕ್ರಮಗಳು ಮತ್ತು ನಿಯಂತ್ರಣಗಳ ಕುರಿತು ಚರ್ಚಿಸಲಾಗಿದೆ. ನಿಪಾ ಅಧಿಕೃತವಾಗಿ ದೃಢಪಟ್ಟರೆ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ.
ಪ್ರಸ್ತುತ ನಿಗಾದಲ್ಲಿರುವ 151 ಜನರಲ್ಲಿ ಇಬ್ಬರಲ್ಲಿ ರೋಗಲಕ್ಷಣಗಳಿವೆ. ಅವರನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ತಿರುವಳ್ಳಿ ಪಂಚಾಯತ್‍ನಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಜಿಲ್ಲೆಯಲ್ಲಿ ಜ್ವರ ಪೀಡಿತರ ಪತ್ತೆಗೆ ಸಮೀಕ್ಷೆ ಆರಂಭಿಸಲಾಗಿದೆ.