ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ 16 ವರ್ಷಗಳ ಬಳಿಕ ಮೊದಲ ಬಾರಿಗೆ ಪೋಲಿಯೊ ಪ್ರಕರಣ ಪತ್ತೆಯಾಗಿದೆ.
ಮಗುವಿನಲ್ಲಿ ಪೋಲಿಯೊ ವೈರಸ್ (ಡಬ್ಲ್ಯೂಪಿವಿ 1) ಪತ್ತೆಯಾಗಿರುವುದಾಗಿ ರಾಷ್ಟ್ರೀಯ ಆರೋಗ್ಯ ಕೇಂದ್ರದ ಸ್ಥಳೀಯ ಪ್ರಯೋಗಾಲಯ ದೃಢಪಡಿಸಿದೆ. ದೇಶವನ್ನು ಪೋಲಿಯೊ ಮುಕ್ತ ಮಾಡುವ ಪಾಕಿಸ್ತಾನದ ಪ್ರಯತ್ನಕ್ಕೆ ಈ ಮೂಲಕ ಹಿನ್ನಡೆಯಾಗಿದೆ.
ಪಾಕಿಸ್ತಾನದಲ್ಲಿ ಈ ವರ್ಷ ಪತ್ತೆಯಾದ 17ನೇ ಪೋಲಿಯೊ ಪ್ರಕರಣ ಇದಾಗಿದೆ.
'ಪಾಕಿಸ್ತಾನದಲ್ಲಿ ಮತ್ತೊಂದು ಪೋಲಿಯೊ ಪ್ರಕರಣ ಪತ್ತೆಯಾಗಿರುವುದು ತುಂಬಾ ಆಘಾತಕಾರಿ ಸಂಗತಿಯಾಗಿದ್ದು. ಇದಕ್ಕೆ ಶಾಶ್ವತ ಪರಿಹಾರವಿಲ್ಲದಿದ್ದರೂ, ಲಸಿಕೆಗಳ ಮೂಲಕ ನಿಯಂತ್ರಿಸಬಹುದಾಗಿದೆ' ಎಂದು ಪ್ರಧಾನ ಮಂತ್ರಿ ಕಚೇರಿಯಲ್ಲಿನ ಪೋಲಿಯೊ ನಿರ್ಮೂಲನಾ ವಿಭಾಗದ ಅಧಿಕಾರಿ ಆಯೇಷಾ ರಜಾ ಫಾರೂಕ್ ಅವರು ತಿಳಿಸಿದ್ದಾರೆ.
'ಸೆ.9ರಿಂದ ಆರಂಭವಾಗಲಿರುವ ಪೋಲಿಯೊ ಲಸಿಕೆ ಅಭಿಯಾನವನ್ನು ಪರಿಣಾಮಕಾರಿಯಾಗಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.