ತಿರುವನಂತಪುರಂ: ನಿಪಾ ಕಾಯಿಲೆಗೆ ಸಂಬಂಧಿಸಿದಂತೆ ಮಲಪ್ಪುರಂ ಜಿಲ್ಲೆಯಲ್ಲಿ 175 ಜನರನ್ನು ಸಂಪರ್ಕ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ಅವರಲ್ಲಿ 74 ಮಂದಿ ಆರೋಗ್ಯ ಕಾರ್ಯಕರ್ತರು. 126 ಜನರು ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿ ಮತ್ತು 49 ಜನರು ದ್ವಿತೀಯ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಪ್ರಾಥಮಿಕ ಪಟ್ಟಿಯಲ್ಲಿರುವ 104 ಮಂದಿ ಹೈ ರಿಸ್ಕ್ ವಿಭಾಗದಲ್ಲಿದ್ದಾರೆ. ಸಂಪರ್ಕ ಪಟ್ಟಿಯಲ್ಲಿರುವ 10 ಜನರು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ 13 ಜನರ ಜೊಲ್ಲುರಸವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ಫಲಿತಾಂಶ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಸಚಿವರು ಮಾಹಿತಿ ನೀಡಿದರು.
ನಿಪಾ ಪರಿಶೀಲನಾ ಸಭೆಯು ಸಚಿವರ ನೇತೃತ್ವದಲ್ಲಿ ನಿನ್ನೆ ಸಂಜೆ ಆನ್‍ಲೈನ್‍ನಲ್ಲಿ ನಡೆಯಿತು. ನಿಪಾ ಎಚ್ಚರಿಕೆಯ ನಂತರ, ಮಲಪ್ಪುರಂನ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ನಿಯಂತ್ರಣ ಸೆಲ್ ಪ್ರಾರಂಭಿಸಲಾಗಿದೆ. 0483 2732010 ಮತ್ತು 0483 2732060 ಗೆ ಕರೆ ಮಾಡುವ ಮೂಲಕ ನಿಪಾ ನಿಯಂತ್ರಣ ಕೋಶವನ್ನು ಸಂಪರ್ಕಿಸಬಹುದು.
ಮೃತ 24 ವರ್ಷ ವಯಸ್ಸಿನವರ ಪ್ರಯಾಣದ ವಿವರಗಳು ಮತ್ತು ಸಮಯವನ್ನು ಒಳಗೊಂಡಿರುವ ಮಾರ್ಗ ನಕ್ಷೆಯನ್ನು ಪರಿಶೀಲಿಸಿದ ನಂತರ, ಸಂಪರ್ಕ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆ ಇರುವವರು ನಿಯಂತ್ರಣ ಕೋಶಕ್ಕೆ ತಿಳಿಸಬೇಕು.
ಮೃತರ ಮನೆಯಿಂದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ 66 ತಂಡಗಳಲ್ಲಿ ಕ್ಷೇತ್ರ ಸಮೀಕ್ಷೆ ಆರಂಭಿಸಲಾಗಿದೆ. ಇದರ ಭಾಗವಾಗಿ ಮಂಬಾಡ್ ಗ್ರಾಮ ಪಂಚಾಯಿತಿಯಲ್ಲಿ 590 ಮನೆಗಳು, ವಂತೂರಿನಲ್ಲಿ 447 ಮನೆಗಳು ಮತ್ತು ತಿರುವಳ್ಳಿಯಲ್ಲಿ 891 ಮನೆಗಳು ಸೇರಿದಂತೆ ಒಟ್ಟು 1928 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಒಟ್ಟು 49 ಜ್ವರ ಪ್ರಕರಣಗಳು ವರದಿಯಾಗಿದ್ದು, ಮಂಬಾಡ್ ಗ್ರಾಮ ಪಂಚಾಯಿತಿಯಲ್ಲಿ 10, ವಂಡೂರಿನಲ್ಲಿ 10 ಮತ್ತು ತಿರುವಳ್ಳಿಯಲ್ಲಿ 29 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಂಬಾಡ್‍ನಲ್ಲಿ ಕಂಡುಬಂದ ಒಂದು ಜ್ವರ ಪ್ರಕರಣ ಮಾತ್ರ ಸಂಪರ್ಕ ಪಟ್ಟಿಯಲ್ಲಿ ಸೇರಿದೆ.
ಕಂಟೈನ್‍ಮೆಂಟ್ ವಲಯ ಎಂದು ಘೋಷಿಸಲಾದ ಪ್ರದೇಶಗಳಲ್ಲಿ ಟ್ಯೂಷನ್ ಸೆಂಟರ್‍ಗಳು ಮತ್ತು ಅಂಗನವಾಡಿಗಳು, ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸದಂತೆ ಸೂಚನೆ ನೀಡಲಾಗಿದೆ. ಕಂಟೈನ್‍ಮೆಂಟ್ ವಲಯದಲ್ಲಿ ನಿಯಮಾವಳಿಗಳನ್ನು ಪಾಲಿಸುವಂತೆ ಪೋಲೀಸರಿಗೆ ಸಭೆಯಲ್ಲಿ ಸೂಚಿಸಲಾಯಿತು.