ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 21 ನೇ ಚಾತುರ್ಮಾಸ್ಯ ಸೆ.18. ರಂದು ಬುಧವಾರ ಸಂಪನ್ನಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ಸೆ.15 ರಂದು ಸೂರ್ಯಾಸ್ತದಿಂದ ಸೆ.17 ರ ಸೂರ್ಯಾಸ್ತದವರೆಗೆ "ಅಖಂಡ ಭಜನೋತ್ಸವ" ನಡೆಯಲಿದೆ.
ಸೆ.17 ರಂದು ಸಂಜೆ 6.30 ರಿಂದ ಪೂಜ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಬಡಾಜೆ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ, ಉದ್ಯಮಿ ಬಲರಾಮ್ ಭಟ್ ಕಾಕುಂಜೆ, ಭದ್ರಾವತಿಯ ಬನಶಂಕರಿ ದೇವಸ್ಥಾನದ ಅಧ್ಯಕ್ಷ ಎಮ್. ಪ್ರಭಾಕರ,ಭದ್ರಾವತಿ ಸಿದ್ಧರೂಢ ಆಶ್ರಮ ದ ಕಾರ್ಯದರ್ಶಿ ಡಿ. ರಾಮಮೂರ್ತಿ, ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ, ಉದ್ಯಮಿ ಬಾಲಕೃಷ್ಣ, ದೀಕ್ಷಾ ವುಡ್ ಇಂಡಸ್ಟ್ರೀಸ್ ಕುಂಜತ್ತೂರು, ಮೋಹನ್ ಶೆಟ್ಟಿ ತೂಮಿನಾಡು ಉಪಸ್ಥಿತರಿರುವರು.
ಸೆ.18 ರಂದು ಚಾತುರ್ಮಾಸ್ಯ ಮಂಗಲೋತ್ಸವದ ಸಂದರ್ಭದಲ್ಲಿ ಪೂಜ್ಯ ಶ್ರೀ ಗುರುಗಳಿಂದ ಬೆಳಿಗ್ಗೆ 5.30 ರಿಂದ ಪಟ್ಟದ ದೇವರ ಪೂಜೆ ನಂತರ ಮೃತ್ತಿಕ ವಿಸರ್ಜನೆ ನಡೆಯಲಿದೆ. ಬಳಿಕ 7.30 ಕ್ಕೆ ಮಹಾಪೂಜೆ ಗೋಪೂಜೆ ನಡೆದ ನಂತರ ಪೂಜ್ಯರು ಮಂಗಲ ಮಂತ್ರಾಕ್ಷತೆ ಅನುಗ್ರಹಿಸುತ್ತಾರೆ.
ಭಕ್ತಾದಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುಣ್ಯ ಭಾಜನರಾಗಬೇಕಾಗಿ ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.