ಮಹಾರಾಷ್ಟ್ರ: ಹೋಟೆಲ್‌ನಲ್ಲಿ ಆಹಾರ ಸೇವಿಸಿ ಬಿಲ್ ಪಾವತಿಸದೆ ಕಾರು ಹತ್ತಿ ಪರಾರಿಯಾಗುತ್ತಿದ್ದವರನ್ನು ತಡೆದು, ಕಾರಿನ ಬಾಗಿಲು ಹಿಡಿದು ಹಣ ಕೇಳಿದ್ದಕ್ಕೆ ಹೋಟೆಲ್ ವೇಟರ್‌ನನ್ನು 1 ಕಿ. ಮೀ ಎಳೆದೊಯ್ದಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮೆಹ್ಕಾರ್-ಪಂಡರಾಪುರ- ಪಾಲ್ಖಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಹೋಟೆಲ್‌ನಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿದೆ.
ಬಿಳಿ ಬಣ್ಣದ ಕಾರಿನಲ್ಲಿ ಬಂದ ಮೂವರು ಪುರುಷರು ಹೋಟೆಲ್‌ನಲ್ಲಿ ಆಹಾರ ಸೇವಿಸಿದ್ದರು, ಆನ್‌ಲೈನ್ ಪೇಮೆಂಟ್ ಮಾಡಲು ವೇಟರ್ ಬಳಿ ಸ್ಕ್ಯಾನರ್ ತರಲು ಹೇಳಿದ್ದರು. ಆತ ಸ್ಕ್ಯಾನರ್ ತರಲು ಹೋಗಿದ್ದ ವೇಳೆ ಮೂವರೂ ಕಾರು ಹತ್ತಿದ್ದರು. ಕಾರು ಸ್ಟಾರ್ಟ್ ಆದ ಸದ್ದು ಕೇಳಿ ಸ್ಥಳಕ್ಕೆ ಓಡಿಬಂದ ವೇಟರ್ ಕಾರಿನ ಬಾಗಿಲು ತೆರೆದಿದ್ದಾನೆ. ಇಷ್ಟಾದರೂ ಕಾರು ನಿಲ್ಲಿಸದೆ, ಬಾಗಿಲಿಗೆ ಜೋತು ಬಿದ್ದ ವೇಟರ್ ಸಮೇತ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಇನ್ನೊಬ್ಬ ವ್ಯಕ್ತಿ ಕಾರಿನ ಹಿಂಬಂದಿ ಗ್ಲಾಸ್‌ಗೆ ಕಲ್ಲು ಎಸೆದು ತಡೆಯಲು ಯತ್ನಿಸಿದರೂ ದುಷ್ಕರ್ಮಿಗಳು ಕಾರು ಚಲಾಯಿಸಿ ಸಾಗಿದ್ದರು. ಈ ಎಲ್ಲಾ ದೃಶ್ಯಗಳು ಹೋಟೆಲ್ ಹೊರಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೇಟರ್‌ನನ್ನು 1 ಕೀ. ಮೀವರೆಗೂ ಎಳೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಳೆದೊಯ್ದ ಹೋಟೆಲ್ ವೇಟರ್‌ನ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಒತ್ತೆಯಾಗಿರಿಸಿಕೊಂಡಿದ್ದರು. ಅಲ್ಲದೆ ಆತನ ಬಳಿಯಿದ್ದ ₹ 11 ಸಾವಿರಕ್ಕೂ ಹೆಚ್ಚು ಹಣವನ್ನು ದೋಚಿದ್ದರು. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.