ಕಾಸರಗೋಡು: ಕೆಂಪು ಕಲ್ಲು ಕ್ವಾರಿಗಳಿಗೆ ಪರವಾನಗಿ ನೀಡದೆ, ಪರ್ಮಿಟ್ ಹೆಸರಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡುತ್ತಿರುವುದು ಖಂಡನೀಯ. ಅಧಿಕಾರಿಗಳ ಇಂತಹ ಧೋರಣೆ ಖಂಡಿಸಿ ಕೆಂಪುಕಲ್ಲು ಕ್ವಾರಿ ಮಾಲಿಕರು ಪ್ರಬಲ ಹೋರಾಟ ನಡೆಸಲು ತೀರ್ಮಾನಿಸಿರುವುದಾಗಿ ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣನ್ ಕೊಳತ್ತೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ ಕ್ಷೇತ್ರ ಹಾಗೂ ಇತರ ಆವಶ್ಯಕತೆಗಾಗಿ ಕೆಂಪು ಕಲ್ಲು ಸಾಗಿಸುವ ವಾಹನಗಳಿಗೆ ದಂಡ ವಿಧಿಸಿ, ವಹನ ಬಿಟ್ಟುಕೊಡದೆ, ಈ ವಾಹನಗಳನ್ನು ತಿಂಗಳುಗಟ್ಟಲೆ ಗ್ರಾಮಾಧಿಕಾರಿ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲಿ ನಿಲುಗಡೆಗೊಳಿಸಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಆದರೆ ಇತರ ಜಿಲ್ಲೆಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಜಿಲ್ಲಾ ಭೂವಿಜ್ಞಾನ ಇಲಾಖೆಗೆ ಒಪ್ಪಿಸಿ ಅಲ್ಲಿ ದಂಡ ವಿಧಿಸಿ ಎರಡು-ಮೂರು ದಿವಸಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಗ್ರಾಮ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ತಿಂಗಳಾನುಗಟ್ಟಲೆ ವಾಹನಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ವಾಹನಗಳ ಸಾಲದ ಮಾಸಿಕ ಮೊತ್ತ ಪಾವತಿಸಲಾಗದ ಸ್ಥಿತಿ ನಿರ್ಮಾಣವಾಘುತ್ತಿದೆ, ಅಲ್ಲದೆ ಅದರಲ್ಲಿ ಕೆಲಸ ಮಾಡುವ ಕಾರ್ಮಿಕರು ನಿರುದ್ಯೋಗಿಗಳಾಗಿ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ವಾಹನ ಮಾಲಿಕರಿಗೆ ಇಂತಹ ಕಿರುಕುಳ ನೀಡಲಾಗುತ್ತಿದ್ದು, ಇಂತಹ ಕಿರುಕುಳಕ್ಕೆ ಅಧಿಕಾರಿಗಳ ಕಡೆಯಿಂದ ಯಾವುದೇ ಪರಿಹಾರ ಕಂಡುಕೊಳ್ಳಲಾಗದಿರುವುದು ವಿಪರ್ಯಾಸ. ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿಗೆ ದೂರು ನೀಡಿದರೂ ಪರಿಹಾರ ಸಿಕ್ಕಿಲ್ಲ.
ಇಲಾಖೆಯ ಇಂತಹ ನೀತಿಯನ್ನು ಪ್ರತಿಭಟಿಸಿ ಕಾಸರಗೋಡು ಜಿಲ್ಲೆಯ ಸಂಪೂರ್ಣ ಕೆಂಪುಕಲ್ಲು ಕ್ವಾರಿಗಳನ್ನು ಸ್ಥಗಿತಗೊಳಿಸಿ ಕಾರ್ಮಿಕರು ಮತ್ತು ಮಾಲೀಕರು ಸೆ. 16ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇದರ ಅಂಗವಾಗಿ ಸೆ. 19ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ, 20ರಿಂದ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಅನಿರ್ಧಿಷ್ಟಾವಧಿ ಸರಣಿ ಉಪವಾಸ ಸತ್ಯಾಗರಹ ನಡೆಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಸೇನ್ ಬರ್ಕ, ಜಿಲ್ಲಾ ಕೋಶಾಧಿಕಾರಿ ವಿನೋದ್ ಕುಮಾರ್ ಎಂ, ಜಿಲ್ಲಾ ಸಮಿತಿ ಸದಸ್ಯ ಉಮ್ಮರ್ ಎಂ.ಪಿ ಉಪಸ್ಥಿತರಿದ್ದರು.